ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರು ಆಟೋ ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಉಗ್ರವಾದದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೇವಸ್ಥಾನಗಳೇ ಗುರಿ: ಸಂಚು ಬಯಲು
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ, “ಐಸಿಸ್ ಸಂಘಟನೆಯಿಂದ ಪ್ರೇರಣೆ ಪಡೆದಿದ್ದ ಈ ಸ್ಥಳೀಯ ಉಗ್ರ, ಭಾರತದ ಪ್ರಮುಖ ದೇವಾಲಯಗಳನ್ನು ನಾಶಪಡಿಸುವ ಹೀನ ಉದ್ದೇಶ ಹೊಂದಿದ್ದ. ಅದೃಷ್ಟವಶಾತ್, ಬಾಂಬ್ ಟೈಮರ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅದು ಮೊದಲೇ ಸ್ಫೋಟಿಸಿತು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ,” ಎಂದು ತಿಳಿಸಿದ್ದಾರೆ.
ಪಶ್ಚಾತ್ತಾಪ ಕೇವಲ ನಾಟಕ?–
ನ್ಯಾಯಾಲಯದಲ್ಲಿ ಶಾರೀಖ್ ವ್ಯಕ್ತಪಡಿಸಿರುವ ಪಶ್ಚಾತ್ತಾಪದ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು.
ಶಿಕ್ಷೆಯಿಂದ ಪಾರಾಗುವ ತಂತ್ರ: ಶಾರೀಖ್ ನೀಡುತ್ತಿರುವ ‘ಪಶ್ಚಾತ್ತಾಪ‘ದ ಹೇಳಿಕೆ ಕೇವಲ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕೂಡಿದೆಯೇ ಹೊರತು, ಆತನಲ್ಲಿ ನಿಜವಾದ ಮನಪರಿವರ್ತನೆಯಾಗಿಲ್ಲ.
ಸಿಂಡಿಕೇಟ್ಗಳ ಜಾಲ: ಸಮಾಜದಲ್ಲಿ ಶಾರೀಖ್ನಂತಹ ಯುವಕರನ್ನು ಹಾದಿ ತಪ್ಪಿಸುವ ಬೋಧಕರು, ಸಿಂಡಿಕೇಟ್ಗಳು ಮತ್ತು ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ.
ಸರ್ಕಾರಕ್ಕೆ ಆಗ್ರಹ-
ಭಯೋತ್ಪಾದನೆಯ ವಿರುದ್ಧ ಸರ್ಕಾರ ಅತ್ಯಂತ ಕಠಿಣ ನಿಲುವನ್ನು ತಳೆಯಬೇಕು ಎಂದು ಆಗ್ರಹಿಸಿರುವ ಅವರು, “ದೇವಸ್ಥಾನಗಳನ್ನು ಧ್ವಂಸ ಮಾಡಲು ಮತ್ತು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಲು ಆಲೋಚಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಲೇಬೇಕು. ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ಮೂಲಗಳನ್ನು ಬೇರುಸಹಿತ ಕಿತ್ತೆಸೆಯಬೇಕು,” ಎಂದು ಒತ್ತಾಯಿಸಿದ್ದಾರೆ.

