ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜೈನ ಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮದಿನದ ಆಚರಣೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ತಹಶೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ಮಾತನಾಡಿ, 24ನೇ ಹಾಗೂ ಕೊನೆಯ ಜೈನ ತೀರ್ಥಂಕರರಾಗಿದ್ದ ಮಹಾವೀರರು ಅಹಿಂಸೆಯ ಮಹತ್ವವನ್ನು ಸಾರಿ, ಜಗತ್ತಿಗೆ ಶಾಂತಿ ಸೌಹಾರ್ದತೆಯನ್ನು ಬೋಧಿಸಿದ್ದಾರೆ. ಸತ್ಯಾನ್ವೇಷಣೆಗಾಗಿ ಭೋಗದ ಜೀವನವನ್ನು ತೊರೆದು ಶಾಂತಿ, ತ್ಯಾಗ, ಅಹಿಂಸೆ, ಭಾತೃತ್ವ ಭಾವನೆಯನ್ನು ಎಲ್ಲರಲ್ಲಿಯೂ ಮೂಡಿಸಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜ ಸುಧಾರಣೆಗಾಗಿ ಶ್ರಮಿಸಿದ ವರ್ಧಮಾನ ಮಹಾವೀರರ ಕೊಡುಗೆ ಪ್ರಮುಖವಾಗಿದೆ. ಅವರ ತತ್ವಗಳ ಅನುಸರಣೆ ಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯವಾಗುತ್ತದೆ.
ಮಹಾವೀರ ಅವರು ಜೈನ ಧರ್ಮ ಪರಂ ಪರೆಯ ಕುರಿತು ಆಳವಾದ ಅಧ್ಯಯನವನ್ನು ಮಾಡಿದರು. ಅರಮನೆಯ ಸುಖ, ಭೋಗಗಳಲ್ಲಿ ತೊಡಗದೆ, ತ್ಯಾಗಿಗಳ, ವಿರಾಗಿಗಳ ಸಂಪರ್ಕ ಹೆಚ್ಚಾಗುತ್ತಾ ಸಾಗಿ, ವೈರಾಗ್ಯದತ್ತ ಮನಸ್ಸು ಒಲಿಯಿತು. ಸತತ 12 ವರ್ಷಗಳ ಕಾಲ ಘೋರ ತಪಸ್ಸನ್ನು ಮಾಡಿ, ತಮ್ಮ ‘42ನೇ‘ ವಯಸ್ಸಿನಲ್ಲಿ ‘ಕೈವಲ್ಯ ಜ್ಞಾನೋದಯ‘ವನ್ನು ಪಡೆದರು. ‘ಕೈವಲ್ಯಜ್ಞಾನ‘ ಎಂದರೆ, ಇಂದ್ರೀಯ ಗಳನ್ನು ನಿಗ್ರಹಿಸಿ ಸುಖ ಹಾಗೂ ದುಃಖಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡವರು ಎಂದರ್ಥವಾಗಿದೆ ಎಂದರು.
ವರ್ಧಮಾನ ಮಹಾವೀರರು 5 ಪ್ರತಿಜ್ಞೆಗಳು ಮತ್ತು ನಡವಳಿಕೆಯ 3 ನಿಯಮಗಳನ್ನು ಬೋಧಿಸಿದರು. ಇವುಗಳನ್ನು ತ್ರಿರತ್ನಗಳೆಂದು ಕರೆಯುತ್ತಾರೆ. ಪಂಚ ಪ್ರತಿಜ್ಞೆಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳಾಗಿವೆ. ತ್ರಿರತ್ನಗಳೆಂದರೆ, ಸಮ್ಯಕಜ್ಞಾನ, ಸಮ್ಯಕ ದರ್ಶನ, ಸಮ್ಯಕ ಚಾರಿತ್ರಗಳಾಗಿವೆ. ವರ್ಧಮಾನ ಮಹಾವೀರ ಅವರು ಸೇರಿದಂತೆ, ಜೈನ ಧರ್ಮವು ಸದಾತ್ಯಾಗ, ಶಾಂತಿ, ಅಹಿಂಸೆಯ ತತ್ವಗಳನ್ನು ಸರ್ವಕಾಲಕ್ಕೂ ಬೋಧಿಸಿ ಅದರಂತೆಯೇ ನಡೆಯುತ್ತಿದೆ. ಅವರ ತತ್ವಾದರ್ಶಗಳಂತೆ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವೀರ ಜೈನ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರಮೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ್, ಗ್ರಾಪಂ ಮಾಜಿ ಸದಸ್ಯೆ ನಾಗರತ್ನಮ್ಮ ಹಾಗೂ ಜೈನ ಸಮುದಾಯದ ಮುಖಂಡರು ಹಾಜರಿದ್ದರು.

