ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರ ಕಚೇರಿಯೂ ಸಾರ್ವಜನಿಕ ಸ್ನೇಹಿ ಆಡಳಿತವನ್ನು ಅಳವಡಿಸಿಕೊಂಡ ಹಿನ್ನಲೆ ಈ ವರ್ಷವೂ ಕಡತ ವಿಲೇವಾರಿಯಲ್ಲಿ 100% ಸಾಧನೆ ಮಾಡಿದೆ.
ವಿಕಾಸಸೌಧದಲ್ಲಿರುವ ಕೃಷಿ ಸಚಿವರ ಕಛೇರಿಗೆ ಆಗಮಿಸಿದ ಸಾರ್ವಜನಿಕರಿಗೆ ವೇಗವಾದ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಕೃಷಿ ಸಚಿವರ ಸಿಬ್ಬಂದಿಯ ವಿಶೇಷ ಕಾಳಜಿಯಿಂದ ಎಲ್ಲಾ ಬಾಕಿ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಮಯಬದ್ಧವಾಗಿ ವಿಲೇವಾರಿ ಮಾಡಲಾಗಿದೆ..ಇದರ ಮೂಲಕ ಆಡಳಿತದ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಮಹತ್ವದ ಹೆಜ್ಜೆ ಇಡಲಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಕೃಷಿ ಸಚಿವರ ಕಛೇರಿಯಲ್ಲಿ ನೂರು ಶೇಕಡ ಕಡತ ವಿಲೇವಾರಿ ಸಾಧನೆ ಮಾಡುತ್ತಾ ಬರಲಾಗಿದೆ. ಅನುಭವ ಮತ್ತು ಮಾರ್ಗಸೂಚಿಗಳನ್ನು ಆಧಾರವಾಗಿ ಪಡೆದುಕೊಂಡು ಈ ವರ್ಷವೂ ಸಮರ್ಪಕ ಯೋಜನೆ ಹಾಗೂ ಪರಿಣಾಮಕಾರಿ ಕಾರ್ಯ ಸಾಧನೆಗಳ ಮೂಲಕ ಈ ಸಾಧನೆ ಸಾಧ್ಯವಾಗಿದೆ.
2025-26 ನೇ ಸಾಲಿನಲ್ಲಿ ಕೃಷಿ ಸಚಿವರ ಕಚೇರಿಯಲ್ಲಿ ಒಟ್ಟು 909 ಕಡತಗಳನ್ನ ಪರಿಶೀಲಿಸಿ ನಿಯಮಾನುಸಾರ ಹಾಗು ಸಮಯಬದ್ಧವಾಗಿ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಲಾಗಿದೆ..ಹಾಗೇಯೆ ಮಾರ್ಚ್ ತಿಂಗಳ ಅಂತ್ಯಕ್ಕೆ ಒಟ್ಟು 4201 ಪತ್ರಗಳನ್ನು ಸ್ವೀಕರಿಸಿದ್ದು, ಎಲ್ಲಾ ಪತ್ರಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ.
ಇನ್ನೂ ವಿಧಾನಸಭೆ ಹಾಗೂ ವಿಧಾನಪರಿಷತ್ ನ ಮಾನ್ಯ ಸದಸ್ಯರು ಒಟ್ಟು 352 ಪ್ರಶ್ನೆಗಳನ್ನು ಕೃಷಿ ಇಲಾಖೆಗೆ ಕೇಳಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಾಗಿದೆ.
ಈ ಸಾಧನೆಗೆ ಸಹಕರಿಸಿದ ಸಚಿವರ ಕಚೇರಿಯ ಆಪ್ತ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆಯ ಎಲ್ಲಾ ಸಿಬ್ಬಂದಿಯವರ ಪರಿಶ್ರಮವನ್ನು ಸಚಿವ ಎನ್.ಚಲುವರಾಯಸ್ವಾಮಿಯವರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕ ಸ್ನೇಹಿ ಆಡಳಿತವನ್ನು ಮುಂದುವರೆಸಲು ಸಚಿವರು ಸೂಚಿಸಿದ್ದಾರೆ.

