ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಳ್ಳು ಆರೋಪ ಹಾಗೂ ಅಪಪ್ರಚಾರದಿಂದ ಉಂಟಾದ ಅವಮಾನ ತಾಳಲಾರದೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಘಟನೆಯ ವಿವರ:
ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಬಿ.ಎಂ.ಎಸ್ (BAMS) ವ್ಯಾಸಂಗ ಮಾಡುತ್ತಿದ್ದ, ಪ್ರಸ್ತುತ ಇಂಟರ್ನ್ಶಿಪ್ ನಡೆಸುತ್ತಿದ್ದ ಲಿಖಿತ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಆತ್ಮಹತ್ಯೆಗೆ ಕಾರಣ:
ಮೃತ ವಿದ್ಯಾರ್ಥಿನಿ ಹಾಗೂ ಕಾಲೇಜಿನ ಉಪನ್ಯಾಸಕ ಡಾ. ರಾಜು ಅವರ ನಡುವೆ ಅನೈತಿಕ ಸಂಬಂಧವಿದೆ ಎಂದು ಸಹಪಾಠಿಗಳು ಕಾಲೇಜಿನಲ್ಲಿ ಅಪಪ್ರಚಾರ ಮಾಡಿದ್ದರು ಎನ್ನಲಾಗಿದೆ.
ಈ ವಿಷಯ ತಿಳಿದ ಉಪನ್ಯಾಸಕ ಡಾ. ರಾಜು ಅವರ ಪತ್ನಿ ನಿಶಾ, ಕಾಲೇಜಿಗೆ ಬಂದು ವಿದ್ಯಾರ್ಥಿನಿ ಲಿಖಿತಾ ಜೊತೆ ಗಲಾಟೆ ನಡೆಸಿ, ಎಲ್ಲರ ಮುಂದೆ ಅವಮಾನಿಸಿದ್ದರು ಎಂದು ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಏನಿದೆ?
ಲಿಖಿತಾ ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಸಾವಿಗೆ ಅನುಷಾ, ರಕ್ಷಾ, ಚಿನ್ಮಯಿ ಹಾಗೂ ನಿಶಾ ರಾಜ್ ಅವರೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಸುಳ್ಳು ಆರೋಪಗಳಿಂದ ತನಗಾದ ಅವಮಾನವೇ ಈ ನಿರ್ಧಾರಕ್ಕೆ ಕಾರಣ ಎಂದು ನೊಂದ ಯುವತಿ ಪತ್ರ ಬರೆದಿದ್ದಾಳೆನ್ನಲಾಗಿದೆ.
ಪೊಲೀಸ್ ಭೇಟಿ ಮತ್ತು ತನಿಖೆ:
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲು: ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ: ಡೆತ್ನೋಟ್ನಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿದಿದ್ದು, ಇಡೀ ಜಿಲ್ಲೆಯಲ್ಲಿ ಈ ಘಟನೆ ತೀವ್ರ ಚರ್ಚೆಗೆ ಹಾಗೂ ವಿಷಾದಕ್ಕೆ ಕಾರಣವಾಗಿದೆ.

