ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಶಯ ಕಥೆ ಭಾಗ-1 ಕುಮಾರ್ ಬಡಪ್ಪ
ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ತುಸು ಸುತ್ತಳತೆಯಲ್ಲಿ ಕತ್ತಲು ಸರಿಸಿ ಸಣ್ಣ ಉರಿಯೊಂದಿಗೆ ಕೋಣೆಯ ತುಂಬೆಲ್ಲ ಮಂದವಾಗಿ ಚೆಲ್ಲಿಕೊಂಡಿತ್ತು.
ಚಾಪೆಗೆ ಮೈಯೊಡ್ಡಿದ್ದ ತಿಪ್ಪಯ್ಯ ಹೆಂಡ್ತಿಯ ಮಗ್ಗಲಲ್ಲಿ ಗೊರಕೆಯಲ್ಲಿದ್ದ. ಬೆಳಕಿಗೆ ಬಂದ ಹುಳುಗಳು ಜಳಕ್ಕೆ ಸಿಕ್ಕು ಪಟಪಟನೆ ಸಿಡಿಯುತ್ತಿದ್ದ ಸದ್ದು, ನಿಶ್ಯಬ್ದವನ್ನೂ ಕದಡಿ ಮೌನಕ್ಕೆ ಅಡ್ಡಿ ಮಾಡುತ್ತಿದ್ದವು.
ಹೌದು ನಂದೇನು ತಪ್ಪಿದೆ ? ಗಂಡನ ಜೊತೆಗೆ ಬಂದಾಗ ಉಪಚರಿಸಿದ್ದು ತಪ್ಪೇ ? ಸಲಿಗೆಯಿಂದ ಮಾತನಾಡಿದ್ದು ಒಂದು ಮಹಾಪರಾದವೇ ! ಎಷ್ಟು ಹೊತ್ತಿನ ರಾತ್ರಿ ಇದು ಮನಸ್ಸೇಕೊ ನಿದ್ರೆಯನ್ನೇ ತರುತ್ತಿಲ್ಲ. ಗಾದ್ರಯ್ಯ ಮೊನ್ನೆ ಪಾಲವ್ವನಿಗೆ ಹೊಡೆದದ್ದು ನೋಡಿದ್ರೆ,ಅವಳು ಬದುಕಿರೋದು ಪವಾಡವೇ ಸರಿ.
ಅಂದು ಓಡೋಡಿ ಅಳುತ್ತ ಬಂದ ಬೋಸ,ಸಣ್ಣವ್ವ ಸಣ್ಣವ್ವಾ ಅಪ್ಪ.. ಅವ್ವುಗೆ ಎಂಗಬೇಕೋ ಹಂಗೆ ಹೊಡಿತಿದಾನೆ,ಅವ್ವಾ ಸಾಯ್ತಾಳೆ ಬಿಡಿಸ್ಕಬಾರವ್ವಾ ಅಂತ ಚೀರಿದ್ದು, ಹೋಗ್ಲೇಬಾರದು ಅಂತ ಅಂದ್ಕೊಂಡಿದ್ದ ನಾನು, ಸಿಟ್ಟಿನಲ್ಲಿ ನಡಿಯೋ ಅನಾಹುತವನ್ನ ಹೇಗಾದ್ರು ಮಾಡಿ ತಪ್ಪುಸ್ಬೇಕು ಅಂತ ಹೋಗಿದ್ದು,ಯಾರು ಏನಾದ್ರು ಮಾಡ್ಕೊಂಡು ಹೊಡದಾಡಿ ಸಾಯ್ಲಿ,ನಾನು ಮನೇಲೇ ಇರಬಹುದಾಗಿತ್ತು,ಯಾಕ್ ಹೀಗೆ ಮಾಡ್ಕೊಂಡೆ?.
ಎಚ್ಚರವಿಲ್ಲದಷ್ಟು ಕುಡಿದಿದ್ದ ಗಾದ್ರಯ್ಯ ವ್ಯಾಘ್ರನಾಗಿದ್ದ, ಪಾಲವ್ವನ ತಲೆ ಕೂದಲನ್ನು ಉರಿ ಮಾಡಿ ಬಗ್ಗಿಸಿ ಕಾಲ್ಕೆಳಗೆ ಬಿಳಿಸಿಕೊಂಡು ಬಲಗೈಯಿಂದ ಕುತ್ತಿಗೆಯನ್ನ ಅಮುಕುತ್ತ,ನೀನು ಸತ್ರೇ ಇನ್ನೊಬ್ಳು,ಆಳೋನಿಗೆ ಹತ್ತು ಮಂದಿ, ನಿನ್ನ ಜೊತೇನೆ ಮಲಗ್ಬೇಕು ಅಂತ ಕರಾರು ಮಾಡಿಕೊಂಡಿದಿನೇನೆ ಹಾದರಗಿತ್ತಿ, ಮನಿಗೆ ಬಂದ್ರೆ ಸಾಕು,ಅವಳ್ನ ಮಾಡ್ಕೊಂಡಿದಿಯ ಇವಳ್ನ ಮಾಡ್ಕೊಂಡಿದೀಯಾ,ಅಲ್ಲೇ ಉಣ್ಣೋಗು,ಇಲ್ಲಿಗ್ಯಾಕೆ ಬಂದೆ ಅಂತಿಯಾ,ಎಷ್ಟು ಸೊಕ್ಕೆ ನಿನಗೆ. ಅಕ್ಕಪಕ್ಕದವರು ಅವರವರ ಮನೆಯ ಕದಕ್ಕೆ ನಿಂತು ನೋಡುತ್ತಿದ್ದರಾದ್ರೂ ಯಾರು ಬಿಡಿಸುವ ಪ್ರಯತ್ನ ಮಾಡಿರಲಿಲ್ಲ.
ಬೋಸ ಪಾಲವ್ವನ ಕಿರಚಾಟ ಮಾತ್ರ ಬೊಬ್ಬೆ ಹೊಡೆಯುತ್ತಿತ್ತು. ಇನ್ನೂ ತಡ ಮಾಡಿದ್ರೆ ಪಾಲಕ್ಕ ಉಳಿಯೋದು ಹೇಳಕ್ಕಾಗಲ್ಲ,ಓಬಮ್ಮ ನುಗ್ಗಿದವಳೇ ಗಾದ್ರಯ್ಯನ್ನ ತಳ್ಳಿಕೊಂಡೇ
ಬಿಡು ಪಾಲಣ್ಣ ಹುಡ್ಗ ಅಳ್ತವ್ನೆ ಅದ್ಯಾಕಿಂಗೆ ಹೊಡಿತಿದೀ,ಅದೇನು ತಪ್ಪಾಗೈತೆ ಮಾತಾಡ್ಕೊಂಡು ಬಗೆಹರಿಸ್ಕೊಳ್ಳೋದು ಬಿಟ್ಟು, ಇಬ್ಬರೂ ತೊಂದರೆ ಮಾಡ್ಕೊಂತೀರಿ ಅಷ್ಟೇ.
ಕುಡಿದ ಅಮಲು ಬಾಯಿ ಒಣಗಿ ನಾಲಿಗೆ ತಿರುಗುವುದೇ ಅಸಾಧ್ಯವಾಗಿತ್ತು, ಏದುಸಿರಲ್ಲಿ ತೊದಲುತ್ತಲೇ ಗಾದ್ರಯ್ಯ ಇವಳಿಗೆ ಬಿಡಸ್ಕಬ್ಯಾಡ ಬಿಡಿಲ್ಲಿ,
ಇಂಥ ಮುಂಡೇರಿದ್ರೆ ಮನೆಗಳಿರೋದಿಲ್ಲ ಸರದುಬಿಡು, ಇಲ್ಲಿಗೆ ಹದಿನೈದು ದಿನದ ಹೊತ್ತಾತು,ನನಗೆ ಉಣ್ಣಾಕ ಬಿಡ್ತಿಲ್ಲ, ಮಲಗಕಂತೂ.. ಶಿವನಾಣೆ ಕಣ್ಣೆಲ್ಲಾ ಹಾಳಾಗಿ ಹೋಗ್ಯಾವೆ. ಬೋಸನ್ನ ನೋಡ್ತಾ, ಆ ಬೆಳಿಯೋ ಹುಡ್ಗನಿಗೆ ಹೊತ್ತಿಗೆ ಸರಿಯಾಗಿ ಊಟಕ್ಕೆ ಹಾಕ್ತಿಲ್ಲ.

ಬಿಡು ಗಾದ್ರಣ್ಣ ಅದೇನು ಹೇಳ್ಬೇಕು ಅಂತಿದಿಯಾ ಕೈ ಬಿಟ್ಟು ಹೇಳು, ಅವಳೇನು ತಿರುಗಿ ಹೊಡಿತಾಳೇನು ನಿನಗ, ಎಚ್ಚರ ತಪ್ಪಿದಾಳೆ ಬಿಡಣ್ಣ. ಓಬವ್ವ ಮಾತನಾಡುತ್ತಲೇ ಗಾದ್ರಯ್ಯನ ಕೈಯಿಂದ ಪಾಲವ್ವನ ತಪ್ಪಿಸಿ,ಕದವ ಗಾಳಿಗೆ ಎಳ್ಕೊಳ್ಳುತ್ತಾ, ಜಾರಿದ್ದ ಸೆರಗನ್ನ ಎದೆಯ ಮ್ಯಾಲೆ ಹಾಕಿ, ಲೇ ಬೋಸ ಆ ಗುಡಾಣದಾಗ ಸ್ವಲ್ಪ ನೀರು ತತ್ತಾರೋ ಅಂದ್ಲು.
ಬೋಸ ಅಳುತ್ತಲೇ ತಂಬಿಗೆ ಹಿಡಿದು ಗುಡಾಣದ ಕಡೆ ಓಡಿದ. ಓಬವ್ವ ಪಾಲವ್ವನ ಕಡೆ ಹಾಗೇ ದಿಟ್ಟಿಸಿದಳು. ಕೆದರಿ ಚೆಲ್ಲಿಹೋಗಿದ್ದ ತಲೆಗೂದಲು ಅಷ್ಟಿಷ್ಟು ಗಾದ್ರಯ್ಯನ ಕೈಗೂ ಮೆತ್ತಿಕೊಂಡಿದ್ದವು.
ಅರೆಪ್ರಜ್ಞೆಯಲ್ಲಿ ಕಣ್ಣೆಲ್ಲ ತೇವವಾಗಿ ಎಳೆದಾಟದಲ್ಲಿ ಮುಖ ಕೊರಳೆಲ್ಲ ಪರಿಚಿಕೊಂಡಿತ್ತು, ಉಗುರು ತಾಗಿ ಅಲ್ಲಲ್ಲಿ ಗಾಯಗಳಾಗಿ ರಕ್ತ ವಸರುತ್ತಿತ್ತು, ಬೋಸ ತಂದ ನೀರಿಂದ ಮುಖಕ್ಕಿಷ್ಟು ಚಿಮುಕಿಸಿದ್ದೇ ಓಬವ್ವ ಪಾಲವ್ವನ್ನ ಮಾತನಾಡಿಸತೊಡಗಿದಳು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ…..

