ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಶಯ ಕಥೆ ಭಾಗ-2 ಕುಮಾರ್ ಬಡಪ್ಪ
ಪಾಲಕ್ಕ ಪಾಲಕ್ಕಾ ಕಣ್ಬಿಡು ಸ್ವಲ್ಪ ನೀರು ಕುಡಿ ತಕ್ಕ, ಮೊಳಕಾಲಿಗೆ ತಲೆ ಒರಗಿಸಿಕೊಂಡೇ ಪಾಲವ್ವನ ತುಟಿಗೆ ತಂಬಿಗೆ ಇಟ್ಟು ಬಾಯಿಗೆ ಸ್ವಲ್ಪ ನೀರು ಸುರುವಿದ್ಲು ಓಬವ್ವ. ಒಣಗಿದ ಬಾಯಿಗೆ ನೀರು ಬಿದ್ದದ್ದೇ ತಡ ಪಾಲವ್ವನಿಗೆ ತ್ರಾಣ ಬಂದಂಗಾಯ್ತು, ಕುಂತಲ್ಲಿಯೇ ಕ್ಷೀಣಿಸಿದ ದನಿಯಲ್ಲಿ, ಹೊಡಿ ಬಾರಲೇ ನಿನಗೆ ಹಕ್ಕೈತಿ, ಹೊಡಿ ಬಾರೋ, ಗಂಡ ಅಂತ ಬಗ್ಗಿ ತಾಳಿ ಕಟ್ಟಿಸ್ಕಂಡಿದ್ದಕ್ಕೇ ನಿನಗ ಹಕ್ಕೈತಿ ಹೊಡಿ ಬಾರಲೇ, ನೀನೀಗ ನನ್ನ ಬಿಟ್ರುವೇ ನಾನು ಬದಕ ಸ್ಥಿತೀಲಿ ಇಲ್ಲ, ಈಗಲೇ ಹೊಡೆದು ಸಾಯ್ಸಿಬಿಡು,ನಾಳೆ ನೇಣಾಕ್ಕೊಂಡೊ ಇಲ್ಲ ವಿಷ ಕುಡಿದೋ ಸತ್ರೆ ಮತ್ತಷ್ಟು ತೊಂದ್ರೆ ನಿನಗೆ, ಈಗಲೇ ಸಾಯಿಸ್ಬಿಡು ಬಾರೋ.
ಪಾಲಕ್ಕ ಯಾಕಂಗ ಮಾತಾಡ್ತಿದಿ, ಇದೊಂದು ಗಳಿಗೆ ಸುಮ್ನಿದ್ದು ಆಮ್ಯಾಗ ಮಾತಾಡ್ಕಳ್ರಿ,ಗಾದ್ರಣ್ಣ ಸ್ವಲ್ಪ ಹೊತ್ತು ಹಿಂಗ ಅಡ್ಡಾಡಿ ಬಾ ಹೋಗು ಎಲ್ಲ ಸರಿಯಾಗುತ್ತೆ. ಅಪ್ಪಯ್ಯ ಅವ್ವಗೆ ಹೊಡಿಬ್ಯಾಡ ಅಂತ ಅಳುತ್ತಲೇ ಬೋಸ ಗಾದ್ರಯ್ಯನ ಪಂಚೆಗೆ ಜೋತುಬಿದ್ದಿದ್ದ.
ನೋಡ್ರೀ ಇವಳ್ನ,ನೋಡಿ ಕಲ್ತಕೋಬೇಕು ಬೇರೆ ಹೆಂಗಸರು, ಗಂಡ ಅನ್ನೋ ಮರ್ವಾದೆ ಏನಾದ್ರೂ ಐತ ಇವಳಿಗೆ, ದಾರಿಯಾಗ ಹೋಗೋ ದಾಸಯ್ಯನಿಗೆ ಮಾತಾಡಿದಂಗ ಮಾತಾಡ್ತವ್ಳೆ, ಪಂಚೆ ಮೇಲಕ್ಕೆ ಕಟ್ತಲೇ ಮತ್ತೊಮ್ಮೆ ಪಾಲವ್ವನ ಮ್ಯಾಲೆ ನುಗ್ಗಲು ಯತ್ನಿಸುತ್ತಿದ್ದ ಗಾದ್ರಯ್ಯ, ಬೇಡವೆಂದು ಅಪ್ಪನ ಕಾಲನ್ನೇ ಹಿಂದಕ್ಕೆಳೆದುಕೊಳ್ಳುತ್ತ ಅಳುತ್ತಿದ್ದ ಬೋಸ, ಓಬಕ್ಕನಂತೂ ಕದದಿಂದ ಹೊರಕ್ಕೆ ತಳ್ಳಿಕೊಂಡೇ ಬಂದುಬಿಟ್ಳು, ನಡಿಯಣ್ಣ ಅತ್ಲಗೇ, ಅದೇನಂತ ಮಾತಾಡ್ತಿ, ಅವರಿನ್ನು ಮನಿಗೇ ಬಂದಿಲ್ಲ ಎಲ್ಲೋಗಿದಾರೋ ಏನೋ ? ಹೋಗಿ ಸ್ವಲ್ಪ ಕರ್ಕೊಂಡು ಬರಬಾರದ.
ಒಪ್ಪಿಯೊ ಒಪ್ಪದೆಯೋ ಅಂತೂ ಗಾದ್ರಯ್ಯನ ಗಡಸು ಕೂಡ ಓಬವ್ವನ ಮಾತಿಗೆ ಸ್ವಲ್ಪ ಸೊರಗಿತ್ತು, ಗುನುಗುತ್ತಲೇ ನೆರಿಕೆ ಸಾಟಿಗೆ ಕುಳಿತು ಬಿಡಿ ಬಾಯ್ಗಿಟ್ಟು ಕಡ್ಡಿ ಗೀರ ತೊಡಗಿದ್ದ.
ಸಾವರಿಸಿಕೊಂಡಿದ್ದ ಪಾಲವ್ವ ಕುಳಿತುಕೊಳ್ಳುತ್ತಾ ಲೇ ಓಬಿ ನಾನು ಮಣ್ಣಾಗತನಕನಾದರೂ ಬಿಡೇ ಅವನ್ನ ನೋಡೋ ಮಂದಿಗೆ ಅಣ್ಣ ತಂಗಿ ನಾಟಕ ಬ್ಯಾರೆ, ನನ್ನ ಮನೆ ಇಷ್ಟು ರಾಣರಂಪಾ ಆಗಿರೋದು ನಿನ್ನಿಂದ್ಲೇ ಕಣೇ.
ಕದಕ್ಕೆ ಒರಗಿದ್ದ ಪಾಲವ್ವನಿಗೆ ಸಹನೆಯ ಕಟ್ಟೆ ಹೊಡೆದಿತ್ತು. ಇಬ್ಬರ ಜಗಳ ಬಿಡಿಸಲು ಬಂದ ಒಬ್ಬಕ್ಕನಿಗಂತೂ ಇದ್ದಕ್ಕಿದ್ದಂತೆ ಬಂದ ಸುದ್ದಿಯ ಭಯದಿಂದಾಗಿ ತತ್ತರಿಸಿ ಹೋದಳು.
ಏನೂ ? ಈ ಗಲಾಟೆಗೆ ನಾನು ಕಾರಣನೇ ?!
ಎತ್ಲಾಗೆ ಮಾತಾಡ್ತಿದಿ ಪಾಲಕ್ಕ ಸ್ವಲ್ಪ ತಲೆ ನೆಟ್ಟುಗಿಟ್ಕೊಂಡು ಮಾತಾಡು, ನನಗೂ ನನ್ನ ಗಂಡ ಅದಾನೆ,ಸಾಯ್ತಿ ಅಂತ ಬಿಡಸಾಕೆ ಬಂದ್ರೆ ನನ್ನೇ ಸೂಳೆ ಅಂತಿಯಾ, ಅಂಥಾ ಗತಿ ನನಗಿನ್ನೂ ಬಂದಿಲ್ಲ, ಸರಕ್ಕನೆ ಘಟಿಸಿದ ಮಾತುಗಳು,ಓಬವ್ವನಿಗೂ ತಾಳ್ಮೆಯನ್ನ ಅದುಮಿಟ್ಟುಕೊಳ್ಳಲಾಗಲಿಲ್ಲ.
ನೆರೆವರೇಯ ಬಾಯ್ಗಳಿಂದಾಗ್ಲೇ ಗುಸು.. ಗುಸು ತಲೆಯಿಂದ ತಲೆಗೆ, ನಮಗ್ಯಾಕೆ ಬೇಕು ಬರ್ರವ್ವ, ಇದಾಗ್ಲೇ ಬಾಳ ದಿನಗಳಿಂದ ಹೊಗೆ ಆಡತೈತಿ, ಉಪ್ಪು ತಿಂದೋರು ನೀರು ಕುಡ್ಕೋತಾರೆ. ಮುದುಕಿ ಅಂಗಡಿ ಬಸಕ್ಕ, ಬೇರೆ ಹೆಂಗಸರ ಕಡೆ ನೋಡ್ಕಂತ ಗುನುಗುತ್ತಲೇ ಸಾಗಿದ್ದಳು. ಜನಗಳ ಬಾಯಲ್ಲಿ ಒಳಗೇ ಮುರುಟಿಕೊಂಡಿದ್ದ ಸುದ್ದಿ ಬೀದಿಗೆ ಬೀಳುತ್ತಲೇ, ಗಾದ್ರಯ್ಯನ ನಿಶೆ ಕೂಡ ಸ್ವಲ್ಪ ತಗ್ಗಿದಂಗಾಗಿತ್ತು, ಬೈದಾಡಿಕೊಳ್ಳುತ್ತಲೇ ಸರಾಯಿ ಅಂಗಡಿ ಕಡೆ ಹೆಜ್ಜೆ ಹಾಕ ತೊಡಗಿದ.

ಬೋಸ ಅವ್ವನ್ನ ಸಂತೈಸುತ್ತಾ ರಟ್ಟೆಗೆ ಕೈ ಹಾಕಿ ಮನೆಯ ನಡುಬಟ್ಟೆಗೆ ಎಳೆಯತೊಡಗಿದ್ದ. ಪಾಲವ್ವನ ಶಂಕಿತ ಸವತಿಯ ದನಿ ಓಬವ್ವನ ಮೇಲೆ ಸವಾರಿ ಮಾಡಿತ್ತು, ಬಿಡಿಸಲು ಬಂದ ಓಬವ್ವಗೆ ಅವಮಾನವೆಲ್ಲ ಒಮ್ಮೆಲೇ ಕಳಚಿ ಬಿದ್ದಂತಾಗಿ ದುಃಖ ತುಂಬಿ ಬಂದಿತ್ತಾದರೂ, ಭಾರದ ಹೆಜ್ಜೆಗಳೊಂದಿಗೆ ನೆರೆವರೆಯವರಿಗೆ ತೋರಿಸಿಕೊಳ್ಳದೆ ತಲೆ ತಗ್ಗಿಸಿಯೇ ನಡೆದಳು ಮನೆಯ ಕಡೆ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ ನಾಳೆಗೆ….

