ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಕೂನಿಕೆರೆ ಗ್ರಾಮದ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವು ದಿನಾಂಕ 07-04-2026 ರಿಂದ 12-04-2026ರವರೆಗೆ ಅತ್ಯಂತ ವೈಭವದಿಂದ ಜರುಗಲಿದ್ದು, ಈ ಕುರಿತು ಸಕಲ ಸಿದ್ಧತೆಗಳಿಗಾಗಿ ಶನಿವಾರ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಮುಖ ದಿನಾಂಕಗಳು-
ಜಾತ್ರಾ ಮಹೋತ್ಸವ: ಏಪ್ರಿಲ್ 7 ರಿಂದ ಏಪ್ರಿಲ್ 12, 2026.
ಬ್ರಹ್ಮ ರಥೋತ್ಸವ: ಏಪ್ರಿಲ್ 10, 2026 (ಶುಕ್ರವಾರ).
ಅಧಿಕಾರಿಗಳ ಸೂಚನೆ ಮತ್ತು ಭರವಸೆ-
ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸ್ವಾಮಿ ಎಂ. ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಾತ್ರೆಯ ಯಶಸ್ವಿ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆಗಳು ನಡೆದವು.
ಮೂಲಭೂತ ಸೌಕರ್ಯ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶುಷ್ಮಾ ಮಾತನಾಡಿ, “ಜಾತ್ರೆಯ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಹಾಗೂ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು,” ಎಂದು ತಿಳಿಸಿದರು.
ಶಾಂತಿ ಸುವ್ಯವಸ್ಥೆ: ರಾಜಸ್ವ ನಿರೀಕ್ಷಕ ಸ್ವಾಮಿ ಎಂ.ಎನ್. ಅವರು ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ, ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಜವಾಬ್ದಾರಿಯನ್ನು ಗ್ರಾಮಸ್ಥರು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಮನವಿ ಮಾಡಿದರು.
ಸಂಪರ್ಕ ಮತ್ತು ಸುರಕ್ಷತೆ: ಕೂನಿಕೆರೆ ಗ್ರಾಮ ಆಡಳಿತಾಧಿಕಾರಿ ಪಿ. ರಾಜು ಮಾತನಾಡಿ, ಜಾತ್ರಾ ಅವಧಿಯಲ್ಲಿ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ದೇವಸ್ಥಾನ ಸಮಿತಿಯ ಮುಖಂಡರುಗಳಾದ ಜಿ. ಶಿವಾನಂದ, ಲಿಂಗರಾಜು, ಪ್ರಧಾನ ಅರ್ಚಕ ನರಸಿಂಹಮೂರ್ತಿ, ಎ.ವಿ. ಕೊಟ್ಟಿಗೆ ಗೋವಿಂದರಾಯ, ದೇವರಾಜು, ಕೂನಿಕೆರೆ ಗೋವಿಂದರಾಯ, ಜೆ. ಶಿವಣ್ಣ, ಪುಟ್ಟಣ್ಣ, ಮಾಡಲಗಿರಿಯಪ್ಪ, ಬಿ.ಟಿ. ಗೌಡ, ಚಿದಾನಂದ, ಹೆಚ್. ಮಾರುತಿ ಹಾಗೂ ಬಿಲ್ ಕಲೆಕ್ಟರ್ ರವಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕೆ.ಜಿ. ಹನುಮಂತರಾಯ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಮತ್ತು ಭಕ್ತಾದಿಗಳು ಭಾಗವಹಿಸಿ ಜಾತ್ರೆಯ ಯಶಸ್ಸಿಗೆ ಸಹಕರಿಸುವ ಭರವಸೆ ನೀಡಿದರು.

