ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮದಿಂದ ರಫ್ತು ಮತ್ತು ಖರೀದಿ ವ್ಯವಸ್ಥೆಯಲ್ಲಿ ಉಂಟಾದ ಅಸ್ಥಿರತೆ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆ ಎಪಿಎಂಸಿಗೆ ಬರುತ್ತಿರುವ ಟೋಮ್ಯಾಟೋಗೆ ಬೇಡಿಕೆ ಕುಸಿದಿದ್ದು, ಮಾರಾಟವಾಗದೆ ಉಳಿಯುತ್ತಿರುವ ಕೆಂಪು ಸುಂದರಿ ಟಮೋಟೋಗಳನ್ನು ರೈತರು ಕುರಿ, ಮೇಕೆಗಳಿಗೆ ಆಹಾರವಾಗಿ ನೀಡುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಕಂಡು ಬರುತ್ತಿವೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಐದು ತಾಲೂಕುಗಳಿಂದ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಹೊಸಪೇಟೆ ಎಪಿಎಂಸಿಗೆ ಟೋಮ್ಯಾಟೋ ಆಗಮಿಸುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಪತನವಾಗಿದ್ದು, ವ್ಯಾಪಾರಿಗಳು ಖರೀದಿಗೆ ಮುಂದಾಗದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿತ್ಯ ಮೂರುರಿಂದ ನಾಲ್ಕು ಟ್ರಾಕ್ಟರ್ ಲೋಡ್ ಟೋಮ್ಯಾಟೋ ಹೊಸಪೇಟೆ ಎಪಿಎಂಸಿಯಿಂದ ನೇರವಾಗಿ ಕುರಿಹಟ್ಟಿಗಳಿಗೆ ಸಾಗುತ್ತಿದೆ ಎನ್ನುವುದು ಸ್ಥಳೀಯರ ಹೇಳಿಕೆ. ಎಪಿಎಂಸಿಗೆ ಬಂದ ಟಮೋಟೋವನ್ನು ವ್ಯಾಪಾರಿಗಳು ಖರೀದಿಸದ ಕಾರಣ, ರೈತರು ಅದನ್ನು ರಸ್ತೆ ಬದಿಗೆ ಸುರಿಯುವ ಬದಲು ಕುರಿ ಸಾಕಾಣಿಕೆ ರೈತರಿಗೆ ನೀಡುತ್ತಿದ್ದಾರೆ.
ಇದರಿಂದ ಜಂಬುನಾಥನಹಳ್ಳಿ, ರಾಯರ ಕೆರೆ ಭಾಗ ಸೇರಿದಂತೆ ಹೊಸಪೇಟೆ ಸುತ್ತಮುತ್ತಲಿನ ಕುರಿಹಟ್ಟಿಗಳಲ್ಲಿ, ಟ್ರಾಕ್ಟರ್ ಲೋಡ್ಗಳಷ್ಟು ಟಮೋಟೋಗಳನ್ನು ಕುರಿ ಮತ್ತು ಮೇಕೆಗಳಿಗೆ ಸುರಿದು ಹಾಕುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಟಮೋಟೋ ಮಾತ್ರವಲ್ಲದೆ ಉಳ್ಳಾಗಡ್ಡಿ, ಬದನೆಕಾಯಿ ಸೇರಿದಂತೆ ಮಾರಾಟವಾಗದೆ ಉಳಿದ ತರಕಾರಿಗಳನ್ನೂ ಕುರಿ ಸಾಕಾಣಿಕೆ ರೈತರು ಟ್ರಾಕ್ಟರ್ಗಳಲ್ಲಿ ಕೊಂಡೊಯ್ಯುತ್ತಿದ್ದಾರೆ.

ಒಂದೆಡೆ ಹೋಟೆಲ್ ಮಾಲೀಕರು ಟಮೋಟೋ ಖರೀದಿ ಪ್ರಮಾಣವನ್ನು ಕಡಿಮೆ ಮಾಡಿದ್ದು, ಮತ್ತೊಂದೆಡೆ ಟಮೋಟೋ ಚಿಪ್ಸ್ ತಯಾರಿಕೆಗೆ ಖರೀದಿಯಾಗುತ್ತಿದ್ದ ಟಮೋಟೋ ಕೂಡ ಈಗ ಬೇಡಿಕೆ ಕಳೆದುಕೊಂಡಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಟಮೋಟೋಗೆ ಸೂಕ್ತ ಬೆಲೆ ಸಿಗದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೆಂಪು ಸುಂದರಿ ಟಮೋಟೋಗೆ ಡಿಮ್ಯಾಂಡ್ ಕುಸಿತ ಉಂಟಾಗಿರುವುದರಿಂದ ರೈತರು ತಮ್ಮ ಬೆಳೆಗೂ ದರ ಸಿಗದೆ ನಿರಾಶರಾಗಿದ್ದಾರೆ. “ರಸ್ತೆ ಮೇಲೆ ಸುರಿಯೋದಕ್ಕಿಂತ ಕುರಿ, ಮೇಕೆಗಳಿಗೆ ಹಾಕಿದ್ರೆ ಆದರೂ ಉಪಯೋಗ” ಎಂಬ ನೋವಿನ ಮಾತು ರೈತರ ಬಾಯಿಂದ ಕೇಳಿಬರುತ್ತಿದೆ.
ಮಾರುಕಟ್ಟೆ ಕುಸಿತದಿಂದ ಉಂಟಾದ ಈ ಪರಿಸ್ಥಿತಿ ರೈತರ ಬೆಳೆ ನಿರ್ವಹಣೆಯಷ್ಟೇ ಅಲ್ಲ, ಉತ್ಪಾದನೆ ವೆಚ್ಚ, ಸಾಗಣೆ ವೆಚ್ಚ, ಕೂಲಿ ಖರ್ಚು ಎಲ್ಲವೂ ನಷ್ಟವಾಗುವಂತೆ ಮಾಡಿದೆ. ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಕ್ರಮ, ಖರೀದಿ ವ್ಯವಸ್ಥೆ ಹಾಗೂ ಬೆಲೆ ಸ್ಥಿರೀಕರಣಕ್ಕೆ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

