ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಶಯ ಕಥೆ ಭಾಗ-6: ಕುಮಾರ್ ಬಡಪ್ಪ.
ಓಬವ್ವೆ ಪಾಲವ್ವನಿಗಿಂತ್ಲೂ ಚೆಲ್ವಿ, ತಿಪ್ಗ ಮತ್ತೆ ನಾನು ಹುಡ್ಗುರಾಗಿನಿಂದ್ಲೂ ಗೆಣೇಕಾರ್ರೆ, ನನಗಿಂತ ಮೂರು ವರ್ಷ ಸಣ್ಣವನಾದರೂ ಕೂಡ್ಕೊಂಡು ಜೊತೆಯಾಗೇ ಬೆಳದ್ವಿ, ನನ್ನ ಮದ್ವೆ ಆದ ಮೇಲೆನೇ ಅವನು ಮದ್ವೆಯಾದದ್ದು , ಅದ್ಯಾಕೋ ಅವನಿಗೆ ಮಕ್ಕಳಾಗಲಿಲ್ಲ ಕಾರಣ ಗೊತ್ತಿಲ್ಲ,ನಾನು ತಿಪ್ಗನ ಮನಿಗೆ ಉಂಬಾಕೆ ಹೋದಾಗ್ಲೆಲ್ಲಾ ಅವಳ ಸಡಗರ ಹೇಳಕಾಗ್ದು, ಅಣ್ಣಾ ಅಂಬೋದೊಂದು ಬಿಟ್ರೆ, ಉಳಿದದ್ದೆಲ್ಲಾ ಅನುಮಾನಕ್ಕೇ ದಾರಿ ಮಾಡಿತ್ತು.ಹಳ್ಳಿ ಜನ ಸುಮ್ನೆ ಮಾತ್ನಾಡಿಕೊಳ್ಳೋದಿಲ್ಲ, ಹೌದು ಓಬವ್ವ ನನ್ನ ಬಯಸಿರಬಹುದೇ?
ನಾನೇ ಅವಳನ್ನ ತಿಳಿದೇ ಹೋದ್ನೇ, ಅವಳ ವಯಸ್ಸು, ತಾಯ್ತನದ ಹಾಲುಣಿಸೋ ತವಕದಿಂದ ನನ್ನ ಬಯಸಿದ್ರೂ ಬಯಸಿರಬಹುದು! ಇರಬೇಕು ?ಅವಳನ್ನ ನಿಭಾಯಿಸೊಕಾಗ್ದೇ ಹತ್ತಲಾರದ ಹೋರಿಯಂತೆ ತಿಪ್ಗ ನರಳಿರಬಹುದೇ ? ಹೀಗೇನಾದ್ರೂ ಆಗಿದೆಯೋ, ಅಥವಾ ಅವಳ ಚೆಲ್ವನ್ನ ನೋಡ ನೋಡುತ್ತಲೇ ಬಯಸಿ ಬಂದ ಭ್ರಮೆಯೋ ! ಅವ್ನು ಮನೆಯಲ್ಲಿ ಇಲ್ಲದಿದ್ದಾಗ್ಲೂ ಸಹ ಎಷ್ಟೋ ಬಾರಿ ಓಬವ್ವ, ಬಾರಣ್ಣ ಅಂತ ಮನೆಗೆ ಕರೆದದ್ದುಂಟು, ನಾನು ನೆಲವನ್ನೇ ನೋಡ್ತಾ ಬೇಗನೆ ಟೀ ಕುಡಿದು ಅವಳ ನಗುವನ್ನೂ ಲೆಕ್ಕಿಸದೇ ಹೊರ ನಡೆದು ಬಿಡ್ತಿದ್ದೆ. ಲಕ್ಷಣವಂತೆಯೊಬ್ಬಳ ಮನಸ್ಸನ್ನ ಅರ್ಥ ಮಾಡಿಕೊಳ್ಳದೇ ಹೋದ್ನಾ……ಛೇ.
ಬಿಚ್ಚಿಕೊಂಡ ನೆನಪುಗಳೊಳಗೆ ಸಾರಾಯಿ ಸುರುವಿಕೊಂಡಿದ್ದೆಷ್ಟೋ ಗೊತ್ತೇ ಆಗಲಿಲ್ಲ.ಮೊನ್ನೆ ಇಬ್ರಿಗೂ ಗಲಾಟೆಯಾದಾಗ್ನಿಂದ ಅವನು ನನ್ನ ಜತೆಯಿಲ್ಲ. ಯಾರೋ ಅಂದ್ರು,ಒಬ್ಬನೇ ಗುತ್ತಿಗೆ ಮಾಡ್ಕೊಂಡಿದಾನಂತೆ,ಎಂಡೆ ಹೊಯ್ದು ಬಟ್ಟಿ ಸುಟ್ಕೊಡಾಕೆ, ಇತ್ತೀಚಿಗೆ ಡಬ್ಬದ ಕಡೆ ಕುಡಿಯಾಕು ಬರ್ತಿಲ್ವಂತೆ, ಸಾರಾಯಿ ಮುತ್ತಣ್ಣ ಆಗಲೇ ಗುನುಗ್ತಾ ಹೇಳ್ತಿದ್ದ,ಪಾಕೀಟ್ ಜಾಸ್ತಿ ಹಾಕಿಸ್ತಿದೀನಿ, ಈಗ ಕುಡಿಯೋರೆಲ್ಲಾ ಕುಡಿಯೋದು ಬಿಟ್ರೆ ನಂದು ಎಂಗ್ರಪ್ಪಾ ಗಾದ್ರಣ್ಣ, ಆ ತಿಪ್ಗನ್ನ ಎಳ್ಕಂಡು ಬಾ ಮಾರಾಯ, ದುಡ್ಡಿಲ್ಲ ಅಂದಾಗ್ಲೂ ಉದ್ರೆ ಕೊಟ್ಟು ಕಳ್ಸಿದಿನಿ, ನೀವು ಕೊಟ್ಟಾಗ ಜಮಾ ತಗಂಡಿದಿನಿ,ಎಂಥಾ ಗೆಳೆಯರು ನೀವಿಬ್ರು, ಅದ್ಯಾಂತದೋ ಕೆಲ್ಸಕ್ಕೆ ಬಾರದ ವಿಷಯಕ್ಕೆ,ಸುಮ್ ಸುಮ್ಮನೆ ಗಲಾಟೆ ಮಾಡ್ಕೊಂಡು ಒಬ್ಬರಿಗೊಬ್ಬರು ಎದುರಾಗಿದಿರಲ್ಲೋ ಮಾರಾಯ, ಮಾತಾಡುತ್ತಲೇ ಮುತ್ತಣ್ಣ ಸಾರಾಯಿಗೆ ಬಂದ ಇನ್ನೊಬ್ಬನ ಕಡೆ ದೃಷ್ಟಿಹರಿಸಿದ.
ಅಮುಲು ಮಟ್ಟ ಮೀರಿ ಬಾಯಿ ತೊದಲುತ್ತಿತ್ತು, ಹೌದು ತಿಪ್ಗ ನಾನು ಎಂಥಾ ಸ್ನೇಹಿತರು, ಅವನೇ ದುಡುಕಿದ್ದು ನಂದೇನು ತೆಪ್ಪಿತ್ತು ? ಜನ ಕೂಗಾಡಿದರು ಪಾಲಿ ಕೂಗಾಡಿದ್ಲು, ಇವ್ನು ನನ್ನ ಮ್ಯಾಲೆ ಬಂದ,ಅಸಲಿ ನಾನು ಓಬವ್ವನ್ನ ಇಟ್ಕಂಡೀನೀ ಅಂತ ಹಳ್ಳಿಯಾಗೆ ಡಂಗುರ ಸಾರಿದ್ನೇನು, ಬೀದ್ಯಾಗೆ ಎಳ್ದಾಡಿ ಅಂಗಿ ಹರದು ಮರ್ವಾದೆ ತಗದ, ಉಸಿರು ಉದ್ವೇಗವಾಗಿತ್ತು ಕಪ್ಪಿನಲ್ಲಿದ್ದ ಸಾರಾಯಿಯನ್ನು ಒಮ್ಮೆಲೆ ಗುಟುಕರಿಸಿದ, ಅವಮಾನ ತಡೆದುಕೊಳ್ಳಲಾಗುತ್ತಿಲ್ಲವೇನೋ ಎಂಬಂತೆ.ನಾನು ಕೈ ಮಾಡಿದ್ರೇ ಸಾಯ್ತಿದ್ದ,ನನಿಗೆ ತಡಿತಾನೇನು ಅವ್ನು,ಮೇಲೆದ್ದವನೇ ದೇಹ ನಿಯಂತ್ರಣಕ್ಕೆ ಬಾರದಿದ್ದರೂ ಅತ್ತಿಂದಿತ್ತ ಓಡಾಡಿದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳಿಗೆ……

