ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕುಟುಂಬ ನಿರ್ವಹಣೆಗೆ ಮೀಸಲಾಗಿರುವ ಮಹಿಳೆ ತನ್ನ ಆರೋಗ್ಯದ ಕಡೆಗೂ ಗಮನ ಕೊಡಲು ಆಗದಂತ ಪರಿಸ್ಥಿತಿಯಲ್ಲಿರುವುದರಿಂದ ಇಂತಹ ವೇದಿಕೆಗಳ ಮೂಲಕ ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳುವಂತೆ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಆರ್.ಶಿವಕುಮಾರ್ ಮಹಿಳೆಯರಿಗೆ ಕರೆ ನೀಡಿದರು.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯಿಂದ ಚೋಳಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆಗ ಮಾತ್ರ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯ. ಸಂಸಾರ ನಿರ್ವಹಣೆ ಜೊತೆ ಹೊರಗಡೆಯೂ ಮಹಿಳೆ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಒಮ್ಮೊಮ್ಮೆ ತನ್ನ ವೈಯಕ್ತಿಕ ಸಮಸ್ಯೆ ಸವಾಲುಗಳನ್ನು ಎದುರಿಸಲು ಆಗುವುದಿಲ್ಲ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿಯಾದರೂ ಮಹಿಳೆಯರು ಒಂದು ಕಡೆ ಸೇರಿ ತಮ್ಮ ಆಗು ಹೋಗುಗಳ ಕುರಿತು ಚರ್ಚಿಸುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸಿ.ಓ.ಸುಧಾ, ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಲೇಖಕ ಹೆಚ್.ಆನಂದ್‌ಕುಮಾರ್, ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ಹೆಚ್.ಭಾರತಿ, ಜಿಲ್ಲಾಧ್ಯಕ್ಷೆ ಪ್ರಿಯಾಂಕ ಪ್ರತಾಪ್, ರಾಜ್ಯ ಕಾರ್ಯದರ್ಶಿ ಶಂಕ್ರಮ್ಮ, ತಾಲ್ಲೂಕು ಅಧ್ಯಕ್ಷೆ ಶ್ರೀದೇವಿ, ಜಿಲ್ಲಾ ಸಂಚಾಲಕಿ ದೇವಮ್ಮ, ಕಾರ್ಯದರ್ಶಿ ಲಕ್ಷ್ಮಮ್ಮ, ಭಾಗ್ಯಮ್ಮ, ಸುಧಾ, ಶಾರದಮ್ಮ, ಎನ್.ಆರ್.ಎಂ.ಎಲ್. ಒಕ್ಕೂಟದ ಅಧ್ಯಕ್ಷೆ ಮಂಜುಳ, ಚೋಳಗಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಿರ್ಮಲ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೀರೇಶ್ ಇವರುಗಳು ವೇದಿಕೆಯಲ್ಲಿದ್ದರು. ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.

