ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೂನಿಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ, ಶ್ರೀ ಕಾಟಮಲಿಂಗೇಶ್ವರ ಸ್ವಾಮಿ, ಶ್ರೀ ಭೂತರಾಯ ಸ್ವಾಮಿ ಹಾಗೂ ಲಕ್ಷ್ಮೀ ದೇವರುಗಳ ಜಾತ್ರಾ ಮಹೋತ್ಸವವು ಏಪ್ರಿಲ್ 07 ರಿಂದ ಆರಂಭವಾಗಿದ್ದು ಏಪ್ರಿಲ್ 12, 2026ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂನಿಕೆರೆಯಲ್ಲಿ ನೆಲೆಸಿರುವ ಈ ದೈವಗಳ ಆರಾಧನೆಯು ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧಾ ಭಕ್ತಿಯಿಂದ ನಡೆಯಲಿದ್ದು, ಭಕ್ತಾದಿಗಳಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಮುಖ ಕಾರ್ಯಕ್ರಮಗಳ ವಿವರ:
ಜಾತ್ರಾ ಮಹೋತ್ಸವದ ಅಂಗವಾಗಿ ವಾರದ ಪೂರ್ತಿ ವಿಶೇಷ ಪೂಜೆಗಳು ನಡೆಯಲಿವೆ.
ಏಪ್ರಿಲ್ 07ರಂದು ಮಂಗಳವಾರ ಸಂಜೆ 7 ಗಂಟೆಗೆ ಕಂಕಣೋತ್ಸವ ಮತ್ತು ರಕ್ಷೋಘ್ನ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಏಪ್ರಿಲ್ 08 ರಂದು ಬುಧವಾರ ಧ್ವಜಾರೋಹಣ, ಶ್ರೀ ಕಾಟಮಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಶ್ರೀ ಅಂಜನೇಯಸ್ವಾಮಿಯ ಪಟ್ಟೋತ್ಸವ ನಡೆದಿದೆ. ಸಂಜೆ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಏಪ್ರಿಲ್ 09 ರಂದು ಗುರುವಾರ ಪಂಚಾಮೃತ ಅಭಿಷೇಕ, ಅಶ್ವವಾಹನ ಉತ್ಸವ, ಗಂಗಾ ಪೂಜೆ ಮತ್ತು ಮುತ್ತು ಪಲ್ಲಕ್ಕಿ ಉತ್ಸವ ಜರುಗಲಿದೆ. ಅಂದು ರಾತ್ರಿ ‘ಆರ್ಕೆಸ್ಟ್ರಾ‘ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಏಪ್ರಿಲ್-10 ರಂದು ಶುಕ್ರವಾರ ರಥೋತ್ಸವ: ಈ ದಿನದ ಪ್ರಮುಖ ಆಕರ್ಷಣೆ ಶ್ರೀ ಅಂಜನೇಯಸ್ವಾಮಿ ರಥೋತ್ಸವ. ರಾತ್ರಿ ಶುಭ ಲಗ್ನದಲ್ಲಿ ರಥಕ್ಕೆ ಕಳಸ ಸ್ಥಾಪನೆ ಹಾಗೂ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 9:30ಕ್ಕೆ ಸಾಮಾಜಿಕ ನಾಟಕ ಪ್ರದರ್ಶನವಿರುತ್ತದೆ.
ಏಪ್ರಿಲ್-11 ರಂದು ಶನಿವಾರ: ಸಹಸ್ರನಾಮಾರ್ಚನೆ, ಪುಷ್ಪಯಾಗ ಸೇವೆ ಹಾಗೂ ಮುಡಿ ಕೊಡುವ (ಉಂಡೆ ಮಂಡೆ) ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್-12 ರಂದು ಭಾನುವಾರ: ವಸಂತೋತ್ಸವ, ಓಕುಳಿ, ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಭಕ್ತಾದಿಗಳಿಗೆ ಮನವಿ:
ಜಾತ್ರಾ ಸಮಿತಿಯು ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದೆ. ಭಕ್ತರು ತಮ್ಮ ಇಷ್ಟಾನುಸಾರ ಅಭಿಷೇಕ ಮತ್ತು ಪೂಜೆಗಳನ್ನು ಸಲ್ಲಿಸಲು ಅವಕಾಶವಿದ್ದು, ದೇವಸ್ಥಾನದ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ.
ಸ್ಥಳ: ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕೂನಿಕೆರೆ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

