ಅಂತರಗಳು ಕಥೆ ಭಾಗ-1- ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೇಸಿಗೆ ಕಳೆದು ಮಳೆಗಾಲದ ದಿನಗಳು ಹತ್ತಿರವಾಗತೊಡಗಿದ್ದವು. ಮೇಲಂತಸ್ತಿನ ವರಾಂಡಕ್ಕೆ ಅಡ್ಡ ಹಾಕಿದ್ದ ಗ್ರಿಲ್ ಗೆ ಮುಖವಿಟ್ಟಿದ್ದ ವೇಣು
, ನೋಡುವ ನೋಟ ಎತ್ತೆತ್ತಲೋ ಹೋಗಿ ಯೋಚನೆಗೂ ತಳ್ಳಿತ್ತು.

ಏಪ್ರಿಲ್ ಬಂದರೆ ವರ್ಷ ತುಂಬಿ ಎರಡನೇ ವರ್ಷಕ್ಕೆ ಬೀಳುತ್ತೆ ಸುಶೀಲ ವೈಕುಂಠ ವಾಸಿಯಾಗಿ. ಅಂತ ಸಾಯುವ ವಯಸ್ಸಲ್ಲವಾದ್ರೂ ಅದಾವ ಬೇನೆ ಬಂದು ಅವಳನ್ನು ಮಣ್ಣಿಗೆ ಎಳೆದೊಯ್ದಿತ್ತೋ. ಅವಳು ಉಳಿಯಲೆಂದು ಬೆಂಗಳೂರು ಆಸ್ಪತ್ರೆಗೆ ಖರ್ಚಾದ ಹಣ ಎಷ್ಟು. ಆದರೂ ದೇವರು ಅವಳನ್ನ ಕರ್ಕೊಂಡು ನನ್ನನ್ನು ಒಂಟಿ ಮಾಡಿಬಿಟ್ಟ.

- Advertisement - 

ಅದೆಷ್ಟು ಸಾರಿ ನನ್ನೊಳಗೆ ಬಂದೂ ಬಂದೂ ಒಂಟಿತನವನ್ನು ಪ್ರಶ್ನೆ ಮಾಡುತ್ತೇ ಈ ನೆನಪು. ಮನಸ್ಸೇಕೋ ಕಸಿವಿಸಿಯಾಯ್ತು. ಮುಗಿಲಿನೆಡೆಗೆ ನೆಟ್ಟ ಕಣ್ಗಳು, ಮಳೆಗಾಲದ ಮೋಡಗಳೆಲ್ಲವೂ ಒಂದೆಡೆ ಸೇರಿ,ಭೂಮಿಗೆ ಎರಗುವುದನ್ನ ನೋಡಲು ಕಾತುರದಿಂದ ಕಾದಿದ್ದವು. ಎಂತಹ ರೂಪವತಿ ಸುಶೀಲೆ, ಅವಳಿಲ್ಲದ ಈ ಬದುಕಿಗೆ ಅರ್ಥವಿದೆಯಾ ಅನಿಸಿತ್ತು.

ಭಾರತಿ ಮದುವೆಯಾಗಿ ಅಳಿಯ ಮಗಳು ದಾವಣಗೆರೆಯಲ್ಲಿ ನಿಶ್ಚಿಂತೆಯಿಂದ ಬದುಕು ಸಾಗಿಸಿಕೊಂಡಿದ್ದಾರೆ, ಮಗನ ಓದು ಮುಗಿದಿದೆ, ಅವನಿಗೊಂದು ಮದ್ವೆ ಎಂಬೋದೊಂದಾದ್ರೆ, ಮುಂದಿನ ನನ್ನ ಬದುಕು ಎಲ್ಲಾದರೇನಂತೆ.

- Advertisement - 

ಆದ್ರೂ ಸುಶೀಲೆಯೊಂದಿಗಿನ ಆ ನೆನಪುಗಳು,ನನ್ನಲ್ಲಿ ಇನ್ನೂ ಹಸಿ ಹಸಿಯಾಗಿಯೇ ಓಡಾಡಿಕೊಂಡಿವೆ. ಎಂತಹ ಮುಗ್ದೆ ಹಾಗೂ ದಿಟ್ಟೆ ಅವಳು, ಅವಳೊಂದಿಗೆ ಕಳೆದ ಒಟ್ಟಾರೆ ದಿನಗಳು ಚಿಕ್ಕ ಚೊಕ್ಕ ಸಂಸಾರದ ಅಪೂರ್ವ ಕ್ಷಣಗಳು, ನನ್ನನ್ನೇಕೆ ಅಗಲಿದೆ ನೀನು, ಪರಿತಪಿಸುತ್ತಿದ್ದ ಹೃದಯಕ್ಕೆ ಸಾಂತ್ವನ ಎನ್ನುವಂತೆ ವೇಣು ಮೇಲೆದ್ದವನೇ ಗ್ರಿಲ್ ನ ಆ ಬದಿಗೂ ಈ ಬದಿಗೂ ಒಂದೇ ಸಮನೇ ಓಡಾಡತೊಡಗಿದ.

ಹೌದು ಎದುರು ಮನೆ ಕೃಷ್ಣಪ್ಪ ಮೊನ್ನೆ ಹೇಳಿದ್ದು ಸರಿ ಅನ್ಸುತ್ತೆ. ಅಲ್ರೀ ಬುದ್ದಿಯೋರ ಅಮ್ಮವ್ರು ಹೋದ ಮ್ಯಾಲೆ, ಎಲ್ಲೋ ಒಂದ್ಕಡೆ ನಿಂತ್ಕಂಡು ಎತ್ಲಾಗೋ ಯೋಚನೆ ಮಾಡ್ತಿರ್ತೀರಾ, ಮೊದ್ಲಿನ ಲವಲವಿಕೆನೇ ಕಾಣ್ತಿಲ್ವಲ್ರೀ, ಹುಟ್ಟು ಸಾವುಗಳನ್ನ ಹಿಡಿದಿಟ್ಟರಕಾಗ್ತತೇನು, ನಡದದ್ದು ನಡಿತೀರ್ತದೆ ನಮಗೆ ಬೇಕಂದ್ರೆ ಹೊಂದಿಸ್ಕೊಬೇಕ್ರಿ ಕೊರೊಗೋದ್ಯಾಕೆ,

ಇನ್ನೊಬ್ರು ಬೇಕು ಅನ್ಸಿದ್ರೆ ಲಗ್ನ ಹಾಗ್ರಿ ಯೋಚನೆ ಯಾಕೇ. ಛೇ.. ಛೆ ಮಗನಿಗೆ ಹೆಣ್ಣು ನೋಡೋ ಸಂದರ್ಭ, ನನಗೊಂದು ಹೆಣ್ಣು ಕೊಡ್ರಿ ಅಂತ,ಹೇಗೆ ಸಮಾಜದ ಮಧ್ಯೆ ಬಾಯಿ ಬಿಡ್ಲಿ, ಮಗನಾದ್ರೂ ಏನಂದುಕೊಂಡಾನು.

ಹೌದು ಸರಿ ಹಾಗಾದ್ರೆ ನನ್ನ ಮಗ್ಗಲು ಇನ್ನೂ ಸಂಗಾತಿಯನ್ನ ಬಯಸ್ತಿದೆಯಲ್ಲಾ ಇದಕ್ಕೇನ್ಮಾಡಲಿ. ಮೊನ್ನೆ ಮೆಕ್ಕಕ್ಕೆ ಹೋಗಿ ಬಂದ, ಚಪ್ಪಲಿ ಅಂಗಡಿ ಇಮಾಮ್ ಸಾಬ್, ಆಸ್ತಿನೆಲ್ಲಾ ಮಕ್ಕಳಿಗೆ ಭಾಗ ಮಾಡಿ, ತಾನೂ ಒಂದು ಭಾಗ ಇಟ್ಕೊಂಡು ಮೂವತ್ತರ ಆಸುಪಾಸಿರೋ ಒಂದು ಮಗುವಿನ ತಾಯಿನ ನಿಖಾಃ ಆದ.

ಇದೇನು ಇಮಾಮಣ್ಣ ಈ ವಯಸ್ಸಿನಲ್ಲಿ ಎಂಥಾದ್ದು ಅಂದ್ರೆ, ಬೇಗಂ ಹೋದ್ಲು, ಎಲ್ಲಾ ಮಕ್ಕಳು ನಿಖಾಃ ಮಾಡ್ಕೊಂಡು ಬೇರೆ ಹೋದ್ರು,ಈಗ ನಾನಿರೋವರೆಗೆ ನನ್ನ ಬೆನ್ನ ಮ್ಯಾಲೆ ಇಷ್ಟು ನೀರಾಕಿ ಮೂರು ಹೊತ್ತು ಅಡಿಗೆ ಮಾಡಿ ಹಾಕಕ್ಕೆ ಯಾರ್ ಇದ್ದಾರಪ್ಪ ನನ್ಗೆ, ಅದಕ್ಕಾಗಿ ಮತ್ತೊಂದು ನಿಖಾಃ ಆಗಿದೀನಿ,ನಾನು ಬದುಕಿರೋವರೆಗೂ ಸೇವೆ ಮಾಡ್ತಾಳೆ,ನನ್ನ ಭಾಗ ಅವಳು ಉಣ್ತಾಳೆ.

ಅಲ್ಹಾನ ಫರ್ಮಾನು ಅವಳಿಗೂ ಒಂದು ಬೇಟಿನೋ ಬೇಟಾನೋ ಆತು ಅನ್ನಿ, ಅದು ವಾರಸ್ದಾರ ಆಯ್ತದೆ,ಇರೋವರೆಗೂ ಮಸೀದಿ ನಮಾಜು,ಇದರ ಜೊತೆಗೆ ಖುಷಿನೂ ಪಡ್ಕೊಂಡು ಖಬರಸ್ತಾನ್ ಕಡೆ ಹೋದ್ರಾಯ್ತು ಅಲ್ವಾ.

ಅಲ್ಹಾ ನಮ್ಗೇನು ಕಡಿಮೆ ಮಾಡಿದಾನೆ ವೇಣುಬಾಯ್ ಅಂತ ನನ್ನೇ ಪ್ರಶ್ನೆ ಮಾಡಿ ಬಾಯಿ ಮುಚ್ಚಿಸಿದ್ದ. ನನ್ನ ಪರಿಸ್ಥಿತಿನೂ ಹಾಗೆ ಇದೆಯಲ್ಲಾ, ಮುಂದೆ ನನ್ನನ್ನ ನೋಡ್ಕೊಳ್ಳೋರು ಯಾರಿದಾರೆ? ಹೌದು ನಾನು ಏಕೆ ಮದ್ವೆ ಆಗಬಾರದು. ಆ ಇಮಾಮ್ ಸಾಬಿಗಿಂತಲೂ ಕಡಿಮೆ ವಯಸ್ಸಿನವ.

ನಿರ್ಧಾರ ಬಿಗಿಗೊಳ್ಳುತ್ತಿದ್ದಂತೆಯೇ ಮನಸ್ಸು ಬರಲಿರುವ ಸಂಗಾತಿಯ ಮೆಲುಕಿನಲ್ಲಿ ವರನ ರೂಪಾಂತರವಾಗಿ ವಧು ಅನ್ವೇಷಣೆಗೆ ಸಿದ್ಧಗೊಂಡಿತ್ತು.
ಲೇಖನ-ಕುಮಾರ ಬಡಪ್ಪ, ಚಿತ್ರದುರ್ಗ.       ನಾಳೆಗೆ……

 

Share This Article
error: Content is protected !!
";