ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ರಸಗೊಬ್ಬರ ಮಾರಾಟಗಾರರಿಗಾಗಿ ವಿಶೇಷ ಜಾಗೃತಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆನ್ಲೈನ್ ಮೂಲಕವೇ ರಸಗೊಬ್ಬರ ವಿತರಣೆ ಕಡ್ಡಾಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಳ್ಳಕೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಾ. ಉಮೇಶ್ ಡಿ ಅವರು ಮಾತನಾಡಿ, “ಪ್ರತಿ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ (K-Kisan) ಆನ್ಲೈನ್ ತಂತ್ರಾಂಶದ ಮೂಲಕವೇ ರಸಗೊಬ್ಬರ ವಿತರಿಸಬೇಕು. ರೈತರ ಎಫ್.ಐ.ಡಿ (FID) ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಯೂರಿಯಾ ನೀಡಬೇಕು” ಎಂದು ಸೂಚಿಸಿದರು. ಮುಖ್ಯವಾಗಿ, ಸಬ್ಸಿಡಿ ದರದ ಯೂರಿಯಾವನ್ನು ಕೃಷಿಯೇತರ ಉದ್ದೇಶಗಳಿಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೃತಕ ಅಭಾವ ಸೃಷ್ಟಿಸಿದರೆ ಶಿಕ್ಷೆ:
ಹಿರಿಯೂರು ಸಹಾಯಕ ಕೃಷಿ ನಿರ್ದೇಶಕರಾದ ಡಾ. ಅಶೋಕ ಜೆ. ಅವರು ಮಾಹಿತಿ ನೀಡಿ, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳು ಅಗತ್ಯ ವಸ್ತುಗಳ ಕಾಯ್ದೆಯಡಿ ಬರುತ್ತವೆ. ಮಾರಾಟಗಾರರು ಕಾಲಕಾಲಕ್ಕೆ ತಮ್ಮ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ರೈತರಲ್ಲಿ ಗೊಂದಲ ಉಂಟುಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಾಸ್ತಾನು ಲಭ್ಯತೆ ಮತ್ತು ಬೇಡಿಕೆಗಳು:
ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಹರ್ಷ ಅವರು ಮಾತನಾಡಿ, ಪ್ರಸ್ತುತ ರೈತರಿಗೆ ವಿತರಿಸಲು ರಸಗೊಬ್ಬರದ ದಾಸ್ತಾನು ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕಂದಿಕೆರೆ ಜಗದೀಶ್ ಅವರು ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ ನೇರವಾಗಿ ರಸಗೊಬ್ಬರ ಸರಬರಾಜು ಮಾಡುವ ವ್ಯವಸ್ಥೆಯಾದರೆ ಸಾರಿಗೆ ವೆಚ್ಚ ಕಡಿಮೆಯಾಗುತ್ತದೆ ಎಂಬ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್, ಕೃಷಿ ಅಧಿಕಾರಿಗಳಾದ ಎಂ.ಎಸ್. ಕಿರಣ್ ಕುಮಾರ್, ಮದನ್ ಕುಮಾರ್, ಪಾರ್ವತಮ್ಮ ಟಿ, ಹಾಗೂ ತಾಂತ್ರಿಕ ವ್ಯವಸ್ಥಾಪಕ ವೆಂಕಟೇಶ್ ಎನ್ ಮತ್ತು ಗೋಪಾಲ ನಾಯ್ಕ ಉಪಸ್ಥಿತರಿದ್ದರು.

