ಚಂದ್ರವಳ್ಳಿ ನ್ಯೂಸ್, ಮೈಸೂರು:
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, “ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರನ್ನು ಕುಟುಂಬ ಸಮೇತ ದರ್ಶನ ಮಾಡಿಕೊಳ್ಳುವ ಭಾಗ್ಯ ನನ್ನದಾಯಿತು. ಸರ್ವರಿಗೂ ಶುಭವಾಗಲಿ ಹಾಗೂ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲಸಲಿ ಎಂದು ತಾಯಿಯಲ್ಲಿ ಅರಿಕೆ ಮಾಡಿಕೊಳ್ಳಲಾಯಿತು” ಎಂದು ತಿಳಿಸಿದ್ದಾರೆ.
ಕುಟುಂಬದೊಂದಿಗೆ ಆಗಮಿಸಿದ್ದ ಅವರಿಗೆ ದೇವಸ್ಥಾನದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಿ, ದೇವಿಯ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಜನರ ಕ್ಷೇಮಾಭಿವೃದ್ಧಿಗಾಗಿ ಮತ್ತು ಮಳೆ-ಬೆಳೆ ಸಮೃದ್ಧಿಯಾಗಿ ನಾಡು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ನೆರೆದಿದ್ದು, ಅವರೊಂದಿಗೆ ಕುಶಲೋಪರಿ ವಿಚಾರಿಸಿದರು. ಈ ಭೇಟಿಯ ವೇಳೆ ಕುಟುಂಬದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.

