ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭೂ ಹೀನರಿಗೆ ಭೂಮಿ ಮತ್ತು ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕೆಂಬ ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಮೇ.೧ ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ಧಿಷ್ಠಾವಧಿ ಹೋರಾಟ ನಡೆಸಲಾಗುವುದೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಖಜಾಂಚಿ ಶ್ರೀರಂಗಾಚಾರಿ ಎಚ್ಚರಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿರವರು ಕಟ್ಟಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಭೂಹೀನರ ಪರವಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದೆ. ಅರಣ್ಯ, ಇನಾಮ್, ಹುಲ್ಲುಬನ್ನಿ, ಗೋಮಾಳ ಸೇಂದಿವನ ಹೀಗೆ ಹಲವಾರು ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯಿದ್ದರು ಸರ್ಕಾರ ಕಾನೂನುಗಳನ್ನು ಅಡ್ಡವಿಟ್ಟು ಭೂಮಿ ಕೊಡಲು ಆಗಲ್ಲ ಎಂದು ಹೇಳುವುದು ಸರಿಯಲ್ಲ. ಎಲ್ಲಾ ಕಾಯಿದೆಗಳ ಅಡ್ಡಿ ಆತಂಕಗಳಿಗೆ ವಿನಾಯಿತಿ ನೀಡಿ ಒನ್ ಟೈಂ ಸೆಟ್ಲಮೆಂಟ್ ಮೂಲಕ ಬಡವರಿಗೆ ತಲಾ ಎರಡು ಎಕರೆ ಜಮೀನು, ವಸತಿ ಇಲ್ಲದವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಬೆಳಗಾವಿಯಲ್ಲಿ ನಡೆದ ಹೋರಾಟದ ಸ್ಥಳಕ್ಕೆ ಬಂದು ನಮ್ಮ ಮನವಿಯನ್ನು ಕೇಳದಿದ್ದರೆ ವಿಧಾನಸೌಧಕ್ಕೆ ಬೀಗ ಹಾಕುವುದಾಗಿ ಹೆಚ್.ಎಸ್.ದೊರೆಸ್ವಾಮಿ ಸಿದ್ದರಾಮಯ್ಯನವರಿಗೆ ಎಚ್ಚರಿಸಿದ್ದರು. ಅವರ ಕನಸಿನಂತೆ ನಾವುಗಳು ಹೋರಾಟದಿಂದ ಹಿಂದೆ ಸರಿಯಬಾರದೆಂದು ಕರೆ ನೀಡಿದರು.
ಸರ್ಕಾರ ಬಡವರಿಂದ ಭೂಮಿ ಕಸಿದುಕೊಂಡು ಉದ್ಯಮಿಗಳು, ಬಂಡವಾಳಶಾಹಿಗಳಿಗೆ ಕೊಡುತ್ತಿದೆ. ಪ್ರಧಾನಿ ಮೋದಿರವರು ೧೦೫೦ ಎಕರೆ ಭೂಮಿಯನ್ನು ಕೇವಲ ಒಂದು ರೂ.ಗೆ ಎಕರೆಯಂತೆ ಅದಾನಿಗೆ ಕೊಟ್ಟಿದ್ದಾರೆ. ಇನ್ನು ರಾಜ್ಯ ಸರ್ಕಾರ ಎಂಟು ನೂರು ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಕೊಟ್ಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.?ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ ಮಾತನಾಡಿ ಹೆಚ್.ಎಸ್.ದೊರೆಸ್ವಾಮಿರವರ ಆಸೆಯಂತೆ ಮೇ.೧ ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಿ ಬಡವರಿಗೆ ಭೂಮಿ ಮತ್ತು ಮನೆಗಳನ್ನು ಕೊಡಿಸೋಣ. ಎಲ್ಲರೂ ಹೋರಾಟದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಸಮಿತಿಯ ಕಾರ್ಯದರ್ಶಿ ಹನುಮಂತಪ್ಪ ಗೋನೂರು ಮಾತನಾಡುತ್ತ ಬಡವರಿಗೆ ಭೂಮಿ ಮತ್ತು ವಸತಿರಹಿತರಿಗೆ ಮನೆಗಳನ್ನು ಸರ್ಕಾರದಿಂದ ಕೊಡಿಸಬೇಕೆಂಬುದು ನಮ್ಮ ಹೋರಾಟದ ಉದ್ದೇಶ. ಭೂಹೀನರಿಗೆ ಭೂಮಿ ಕೊಡಿಸಬೇಕೆಂಬ ಮಹದಾಸೆಯಿಟ್ಟುಕೊಂಡು ಎಚ್.ಎಸ್.ದೊರೆಸ್ವಾಮಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯನ್ನು ಹುಟ್ಟು ಹಾಕಿದರು. ನಾವುಗಳು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ಎದ್ದೇಳು ಕರ್ನಾಟಕ ಜಿಲ್ಲಾ ಮುಖಂಡ ಶಿವಕುಮಾರ್ ಮಾತನಾಡಿ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಬಡವರಿಗೆ ಭೂಮಿ ಮತ್ತು ಶಿಕ್ಷಣ ಕೊಡಿಸಬೇಕೆಂಬುದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪನವರ ಗುರಿಯಾಗಿತ್ತು. ಅದರಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕೂಡ ಬಡವರಿಗೆ ಭೂಮಿ ಕೊಡಿಸಲು ಸಾಕಷ್ಟು ಹೋರಾಟ, ಚಳುವಳಿಗಳಲ್ಲಿ ತೊಡಗಿಕೊಂಡಿದ್ದರು. ಬಹುತೇಕ ಸಂಘಟನೆಗಳಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿರುವುದರಿಂದ ಆಳುವ ಸರ್ಕಾರಗಳು ಬಡವರನ್ನು ನಿರ್ಲಕ್ಷಿಸತ್ತಿವೆ. ಫಲ ಪಡೆಯಬೇಕಾದವರು ಹೋರಾಟಕ್ಕೆ ಬರದಿದ್ದರೆ ನಾಯಕತ್ವ ವಹಿಸಿಕೊಂಡವರಿಗೆ ಕಷ್ಟವಾಗುತ್ತದೆಂದು ತಿಳಿಸಿದರು.
ರಾಜಣ್ಣ ಲಕ್ಷ್ಮಿಸಾಗರ ಮಾತನಾಡುತ್ತ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಕೊರತೆಯಿರುವುದರಿಂದ ಭೂಹೀನರಿಗೆ ಜಮೀನು ಸಿಗುತ್ತಿಲ್ಲ. ಹೋರಾಟದಲ್ಲಿ ಒಡಕುಂಟಾಗಬಾರದು. ಎಲ್ಲಾ ಸಂಘಟನೆಗಳು ಒಂದಾಗಿ ಚಳುವಳಿ ನಡೆಸಿದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದರು.
ಈಚಘಟ್ಟದ ಕರಿಯಪ್ಪ ಮಾತನಾಡಿ ಸರ್ಕಾರಿ ಗೋಮಾಳದಲ್ಲಿ ಬಡವರು ಉಳುಮೆ ಮಾಡುತ್ತಿದ್ದಾರೆ. ಅಂತಹದರಲ್ಲಿ ೫೨ ಎಕರೆ ಜಮೀನನ್ನು ಸರ್ಕಾರ ಸೋಲಾರ್ ವಿದ್ಯುತ್ಗೆ ನೀಡಿದೆ. ಆಗ ಜಿಲ್ಲಾಡಳಿತದ ವಿರುದ್ದ ೨೦೨೪ ರಲ್ಲಿ ಹೋರಾಟ ನಡೆಸಿದರು ಪ್ರಯೋಜನವಾಗಿಲ್ಲ. ಕೆಲವು ಸಂಘಟನೆಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿರುವುದು ನಿಜವಾದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದರು.
ಹೆಚ್.ವೆಂಕಟೇಶ್, ಅಂಜಿನಪ್ಪ, ಸಣ್ಣವೀರಪ್ಪ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

