ಅಂತರಗಳು ಕಥೆ ಭಾಗ-3: ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಲಲಿತೆಯನ್ನ ಭಾರತಿಯ ಜೊತೆಯಲ್ಲಿ ಕಾಲೇಜ್ ದಿನಗಳಿಂದ ಹತ್ತಿರದಿಂದಲೇ ಕಂಡು ಕಣ್ಮಾತುಗಳಲ್ಲಿಯೇ ಪರಿಚಯ, ಇತ್ತೀಚೆಗೆ ಬ್ರೋಕರ್ ಶ್ರೀನಿವಾಸ್ ಬಂದು ಹೋಗುತ್ತಿದ್ದಿದು, ಮಂಜುನಾಥ್ ಅವ್ರೂ ಸಹ ಡ್ಯಾಡಿಯೊಂದಿಗೆ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದುದು ಗಮನಿಸಿದ್ರೆ ಲಲಿತೆಯ ಜೊತೆ ನನ್ನ ಮ್ಯಾರೇಜ್ ತಯಾರಿ ನಡೆದಿದೆ ಅನ್ನೋದು ವೀರೇಶ್ ಗೆ ಮನದಟ್ಟಾಗಿಸಿತ್ತು.

ಆದ್ರೇ ಈ ವಿಚಾರವನ್ನ ಡ್ಯಾಡಿ ಮಾತ್ರ ಎಂದೂ ಪ್ರಸ್ತಾಪವೇ ಮಾಡಿರ್ಲಿಲ್ಲ, ಆ ಶ್ರೀನಿವಾಸ್ ಮಂಜುನಾಥ್ ಅವರ ಜೊತೆ ಮನೆಗೆ ಬಂದಾಗ್ಲೆಲ್ಲಾ, ಸುಮ್ಮನೇ ಮುಖ ನೋಡ್ತಾ ಹುಸಿನಗೆ ತಂದು ಮುಂದಾಗುತ್ತಿದ್ದರು.

- Advertisement - 

ಮೊನ್ನೆ ದಾರಿಯಲ್ಲಿ ಸಿಕ್ಕ ಲಲಿತ, ಅದೆಷ್ಟು ಲವಲವಿಕೆಯಿಂದ ನನ್ನ ನೋಡುತ್ತಲೇ ಹೆಜ್ಜೆ ಹಾಕಿದಳಂದ್ರೆ, ಬೇರೆ ಯಾರಾದ್ರೂ ನೋಡಿದ್ರೆ ಏನಂದ್ಕೊಂಡಾರು ಎಂದು ನಾನೇ ತಲೆತಗ್ಗಿಸಿ ಮುನ್ನಡೆಯುತ್ತಿದ್ದೆ.

ಅವಳದು ಕೂಡ ಅದೇ ಪ್ರಶ್ನೆ ಇಂತಹ ಸುಂದರ ನನಗೆ ಗಂಡನಾಗಿ ದಕ್ಕುತ್ತಿರುವುದು ನನ್ನ ಅದೃಷ್ಟವೇ, ಆದ್ರೆ ಅಪ್ಪ ನನ್ನ ವಿಷಯವಾಗಿ ಆ ಮನೆಗೆ ಓಡಾಡುತ್ತಿರುವುದು ಸರಿ, ಯಾರೊಬ್ರೂ ಮ್ಯಾರೇಜ್ ಪ್ರಸ್ತಾಪ ಮಾಡಿಯೇ ಇಲ್ಲ, ಊರಲ್ಲಿ ಗೊತ್ತಿರೋ ಜನ್ರು ಮಾತ್ರ ವೇಣು ಮಗನಿಗೂ ಮಂಜುನಾಥ್ ಮಗಳಿಗೂ ಮದುವೆ ಸಂಬಂಧ ಕುದುರಬಹುದು ಅಂತ ಹಾಡ್ಕೊಳ್ಳೋದು ಪರಿಯಾಗಿತ್ತು. ಯಾರು ಏನೇ ಅಂದ್ರು ಅವನೇ ನನ್ನ ಗಂಡನಾಗಬೇಕು ಅಂತ ಚೆಲುವ ಅವನು, ಲಲಿತೆಯ ಮನಸ್ಸು ಪೂಜಿಸುವ ದೇವರಲ್ಲಿ ಪರಿಪರಿಯಾಗಿ ಬೇಡಿತ್ತು.

- Advertisement - 

       ಅಂದು ಸಂಜೆ ಬಾಗಿಲಿಗೆ ನೀರಾಕಿ ಊದ್ಬತ್ತಿ ಹಚ್ಚಿ ದೀಪ ಬೆಳಗಿಸುತ್ತಿದ್ದ ಲಲಿತೆಗೆ ತುಸು ದೂರದಲ್ಲಿ ಅಪ್ಪ ಬರುತ್ತಿದ್ದುದು, ಜೊತೆಗೆ ಹಣ್ಣು,ಸಿಹಿ ತಿನಿಸುಗಳು ಕಾಣಿಸಿ ವಿಶೇಷತೆಯನ್ನ ಬಿತ್ತಿದ್ದವು. ಎಂದೂ ಸಹ ತಿಂಡಿ ತಿನಿಸುಗಳೊಂದಿಗೆ ಬಾರದಿದ್ದವರು ಇಂದು ಬಂದದ್ದು ನೋಡಿ ಮಕ್ಕಳಲ್ಲಿ ಖುಷಿಯ ಜೊತೆ ವಿಸ್ಮಯವೂ ಕೂಡ! ಬಾಗಿಲಲ್ಲಿಯೇ ಅಪ್ಪನನ್ನು ಸ್ವಾಗತಿಸಿ ತಂದ ತಿನಿಸುಗಳ ಜೊತೆ ಒಳ ನಡೆದವರೇ ಇಷ್ಟದ ಹಣ್ಣು ಸಿಹಿಯನ್ನ ಹಂಚಿಕೊಳ್ಳತೊಡಗಿದ್ರು. ಬಾಗಿಲ ಗಾಳಿಗಾಗಿ ಒಳಗೋಡೆಯ ಪಕ್ಕದ ಕುರ್ಚಿಗೆ ಕುಳಿತ ಮಂಜುನಾಥ್, ಯಾವುದೋ ಹೊರಲಾರದ ಭಾರವನ್ನೇ ಹೊತ್ತವರಂತೆ ಗೋಚರಿಸುತ್ತಿದ್ರು, ಮಾತಿಗೆ ಮುಂದಾಗಿದ್ದು ಲಲಿತಯೇ. ಯಾಕಪ್ಪ ಸಿಹಿ ತಂದಿದಿರಿ ಅದ್ಯಾಕೋ ಯೋಚನೆ ಮಾಡ್ತಿರೋ ಹಾಗೆ ಕಾಣ್ತಿದೆ. ಏದುಸಿರು ಬಿಡುತ್ತಾ ಮಂಜುನಾಥ್, ನಿನಗೆ ಮದ್ವೆ ವಿಷಯ ತಿಳಿಸಬೇಕಿತ್ತಮ್ಮ, ಒಬ್ಬ ತಂದೆಯಾಗಿ ನನ್ನ ಕರ್ತವ್ಯ ನಾನು ಮಾಡ್ಬೇಕು ತಾನೆ.

ಸರಿ ಹೇಳಿ,ಅದಕ್ಯಾಕೆ ಚಿಂತೆ ಮಾಡ್ತೀರಾ. ನಿನ್ನ ತಂಗಿಯರನ್ನ ನೋಡಿ ನನಗೆ ಒಪ್ಪಿಗೆ ಕೊಡ್ಬೇಕು. ಎಂದೋ ಅಮ್ಮನ್ನ ಕಳ್ಕೊಂಡಿರೋ ನಮ್ಗೆ ಎಲ್ಲವೂ ನೀವೇ ಅಲ್ವಾ ಅಪ್ಪಾ. ಆ ದಿನದಿಂದ ಇಲ್ಲಿವರೆಗೆ ಈ ತಂಗಿಯರಿಗೆ ಅಕ್ಕನಾಗಿ, ತಾಯಿಯಾಗಿ ಜೊತೆಗಿದಿನಿ ಮುಂದೆಯೂ ಇವರನ್ನ ಹಾಗೆ ನೋಡಿಕೊಳ್ತೀನಿ. ಬೇಡ ತಾಯಿ ನೀನು ಸಂತೋಷವಾಗಿ ನಾನು ಹೇಳಿದವರ ಮನೆ ತುಂಬಿದ್ರೆ ಸಾಕು ನನ್ಗೂ ನಿನ್ಗೂ ನಿನ್ನ ತಂಗಿಯರಿಗೂ ಅವರೇ ಸರ್ವಸ್ವವಾಗಿ ನೋಡ್ಕೊಳ್ತಾರೆ, ಆದ್ರೇ…

ಏನಪ್ಪಾ ಅದು ಆದ್ರೆ ? ಮಂಜುನಾಥ್ ರ ಮಾತುಗಳು ಕಂಪಿಸಿ ತೊದಲಲ್ಲಿ ಬರುತ್ತಿದ್ದವು. ಏನಿಲ್ಲ ಮಗಳೇ ನಾವೆಲ್ಲಾ ಸುಖವಾಗಿರ್ಬೇಕು ಅಂದ್ರೆ ನೀನು ಮನಸ್ಸು ಮಾಡಿ, ಭಾರತಿ ತಂದೆ ವೇಣು ಅವ್ರನ್ನ ಮದ್ವೆಯಾಗಿ ನನ್ನ ಮಾತು ಮಾನ ಉಳಿಸಿದ್ರೇ ಸಾಕು ತಾಯಿ.

ಅಪ್ಪಾ……. ಕ್ಷಣ ಕಾಲ ದೃಷ್ಟಿ ಮಂಜಾವರಿಸಿ ಮಾತುಗಳು ಹೊರಬರದಂತಾದ್ವು ಲಲಿತೆಗೆ, ವಯಸ್ಸಿಗೆ ಬಂದಿರೋ ಮಗ ಮಗಳಿರೋ ವ್ಯಕ್ತಿಗೆ, ಮದುವೆಯಾಗು ಅಂತ ಹೇಳೋಕೆ,ನಿಮಗೆ ಮನಸ್ಸಾದರೂ ಹೇಗೆ ಬಂತು ಲಲಿತೆಯ ಧ್ವನಿ ವಿಷಾದದಲ್ಲಿ ಸಣ್ಣಗೆ ತೇಲಿತ್ತು.

ಲಲಿತಾ ನಿನ್ನ ತಂದೆ ಪರಿಸ್ಥಿತಿ ನೋಡು, ಒಂದಂಗಡೀಲಿ ಗುಮಾಸ್ತನಾಗಿ ನಿಮ್ಮೆಲ್ರನ್ನ ನಾನು ಹೇಗೆ ನಿಭಾಯಿಸಲಿ, ನೀನೊಬ್ಬಳು ತ್ಯಾಗ ಮಾಡೋದ್ರಿಂದ ಒಬ್ಬ ಶ್ರೀಮಂತನ ನೆರವಾಗಿ ಈ ನಿನ್ನ ತಂಗಿಯರಿಗೂ ಒಂದು ದಾರಿಯಾಗುತ್ತೆ. ನನ್ನಷ್ಟೇ ವಯಸ್ಸಿನ ಒಬ್ಬರಿಗೆ ಮದುವೆ ಮಾಡ್ಕೊಡ್ತಿದೀನಿ ಅನ್ನೋದು ಬಿಟ್ರೆ, ಕೊಳಿತಾ ಬಿದ್ದರೋ ಶ್ರೀಮಂತಿಕೆಗೆ ರಾಣಿ ಮಾಡ್ತಿದೀನಲ್ಲಮ್ಮ, ಒಪ್ಪಿಕೊಂಡು ನನ್ನ ಮಾತು ಮಾನ ಉಳಿಸಿಕೊಡು ಮಗಳೇ.

ಲಲಿತೆಯ ಕಣ್ಗಳಲ್ಲಿ ತ್ಯಾಗದ ಹನಿಗಳು:
ಕೋಣೆಯ ಕಡೆ ಗಮನಿಸಿದಾಗ, ಸಿಹಿ ಹಂಚಿಕೆಯಲ್ಲಿದ್ದ ತಂಗಿಯರು ಖುಷಿಯಲ್ಲಿ ಒಬ್ಬರಿಗೊಬ್ಬರು ಹಂಚಿ  ತಿನ್ನುತಿದ್ರು. ಅಪ್ಪನೂ ಅಷ್ಟೇ,ದೀನನಾಗಿ ಕಣ್ಣಿಂದ ಜಾರುತ್ತಿದ್ದ  ಹನಿಗಳನ್ನ ಕಾಣಿಸಿಕೊಳ್ಳದೆ ಹುಟ್ಟ ಪಂಚೆಯ ಅಂಚಿನಲ್ಲೇ ಹೊತ್ತಿಕೊಳ್ಳುತ್ತಿದ್ದರು.

ನನ್ನ ಪಾಲಿಗೆ ತಂದೆ ಇಷ್ಟು ಕಟಕರಾದರೇ, ಇಲ್ಲ ಬಡತನ ಅವರನ್ನು ಇಲ್ಲಿಯವರೆಗೆ ತಂದು ಬಿಟ್ಟಿದೆ,ನನ್ನೊಬ್ಬಳ ತ್ಯಾಗದಲ್ಲಿ ಈ ತಂಗಿಯರ  ಭವಿಷ್ಯವಾದ್ರೂ ರೂಪುಗೊಳ್ಳಲಿ, ತುಂಬಿ ಬಂದ ದುಃಖದಲ್ಲಿಯೂ ಮನಸ್ಸು ಸಂತೈಸಿಕೊಳ್ಳಲು ಯತ್ನಿಸಿದಂತಿತ್ತು.

ಮೊನ್ನೆ ಮೊನ್ನೆ ಕಟ್ಟಿಕೊಂಡಿದ್ದ ಚೆಲುವ ವೀರೇಶನೊಂದಿಗಿನ ಕನಸಿನ ಗೂಡು,ಸುಂಟರ ಗಾಳಿಗೆ ಸಿಕ್ಕ ತರಗೆಲೆಗಳಂತೆ ಚದುರಿ ಹೋಗಿದ್ದವು, ತೇವವಾಗಿದ್ದ ಕಣ್ಗಳನ್ನು ವಸ್ತ್ರದಿಂದ ಒತ್ತಿಕೊಳ್ಳುತ್ತಲೇ ಸರಿ ಅಪ್ಪ ನಿಮ್ಮ ಮಾತಿಗೆ ನಾನು ಬದ್ಧವಾಗಿದ್ದೇನೆ ಮುಂದಿನದನ್ನ ನೆರವೇರಿಸಿಕೊಳ್ಳಿ.

ಮಗಳೇ ಲಲಿತಾ……!
ಕಂಠ ಗದ್ಗದಿತವಾಗಿತ್ತು ಮಂಜುನಾಥರಿಗೆ ಮುಂದೆ ಬಾಗಿ ಲಲಿತೆಯ ಕೈಗಳನ್ನು ತನ್ನ ಕೈಯಲ್ಲಿ ತಂದು ಕಣ್ಣಿಗೆ ಹೊತ್ತಿಕೊಂಡಾಗ,ಅಪ್ಪನ ಕಣ್ಣೀರು ಕೈ ಮೇಲೆ ಬಂದು ಕೈಯಲ್ಲ ಒದ್ದೆಯಾಗಿದ್ದವು. ಸಿಹಿ ಹಂಚಿಕೊಳ್ಳುತ್ತಿದ್ದ ತಂಗಿಯರು ಲಲಿತೆಯ ಸುತ್ತ ಬಂದು ಅಕ್ಕ.. ಅಕ್ಕಾ ಸಿಹಿ ನಿನಗೂ ಹಂಚಿದಿವಿ ತಗೊಳ್ಳಿ ಎಂದು ಕೈ ಮುಂದು ಮಾಡಿದ್ರು, ಮಂಜುನಾಥರ ಕಣ್ಗಳಲ್ಲಿ ಮತ್ತಷ್ಟು ಹನಿಗಳು ಬರುತ್ತಲೇ ಇದ್ದವು. ಲಲಿತೆಯ ಕಣ್ಗಳಲ್ಲಿಯೂ ಸಹ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.          ನಾಳೆಗೆ…….

 

Share This Article
error: Content is protected !!
";