ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕರ ಆಕ್ರೋಶ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮಧ್ಯಪ್ರವೇಶದ ನಂತರ ಸ್ಥಗಿತಗೊಂಡಿದ್ದ ವಿವಾದಾತ್ಮಕ ಉಕ್ಕಿನ ಮೇಲ್ಸೇತುವೆಯಂತೆಯೇ, ಈಗ ಸುರಂಗ ಮಾರ್ಗ ಯೋಜನೆಗೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರು ಮಹಾನಗರ ಯೋಜನಾ ಸಮಿತಿ(ಎಂಪಿಸಿ) ಮತ್ತು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಸಂಪರ್ಕಿಸದೆ, 12,690 ಕೋಟಿ ರೂಪಾಯಿ ವೆಚ್ಚದ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗಿನ 18.5 ಕಿ.ಮೀ ಸುರಂಗ ಮಾರ್ಗಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿರುವ ಈ ಯೋಜನೆಯು ‘ಅಸಂವಿಧಾನಿಕ’ ಎಂದು ಸಾಮಾಜಿಕ ಹೋರಾಟಗಾರರು ಮತ್ತು ತಜ್ಞರು ಟೀಕಿಸಿದ್ದಾರೆ.
ಉಕ್ಕಿನ ಮೇಲ್ಸೇತುವೆ ಯೋಜನೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಬೆಂಗಳೂರು ಪ್ರಜಾ ವೇದಿಕೆಯ ಸಂಸ್ಥಾಪಕ ಸದಸ್ಯ ಎನ್.ಎಸ್.ಮುಕುಂದ ಅವರು, ಈ ಯೋಜನೆಯು ‘ಅಸಂವಿಧಾನಿಕ’ ಎಂದು ಹೇಳಿದ್ದಾರೆ.