ಚಂದ್ರವಳ್ಳಿ ನ್ಯೂಸ್, ತಿಪಟೂರು:
ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಾಯಕಾರಿ ಸುಳ್ಳು ಸುದ್ದಿಗಳ ಕುರಿತು ಅತ್ಯಂತ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕಾದ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದರು.
ತಿಪಟೂರಿನ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ, ವಿಚಾರ ಸಂಕಿರಣ ಹಾಗೂ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಗೋಷ್ಠಿ, ಮಾಧ್ಯಮ ಮತ್ತು ರೈತ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಇದರ ಜೊತೆಯಲ್ಲಿ ಟಿವಿ ಮಾಧ್ಯಮಗಳಲ್ಲಿ ಪತ್ರಕರ್ತರು ತಾವೇ ತೀರ್ಪು ನೀಡುವ ರೀತಿಯಲ್ಲಿ ಸುದ್ದಿಗಳನ್ನು ಪ್ರಚಾರ ಮಾಡುವುದರ ಜೊತೆಯಲ್ಲಿ ವಿಶ್ಲೇಷಣೆ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಟಿವಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆಗಳನ್ನು ಪರಿಶೀಲನೆ ಮಾಡಿ ಸುದ್ದಿ ಬಿತ್ತರ ಮಾಡಬೇಕು. ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾ ರಂಗಕ್ಕೆ ತನ್ನದೇ ಆದ ಹೊಣೆಗಾರಿಕೆ ಇದೆ. ಜನಪ್ರತಿನಿಧಿಗಳು, ಸರ್ಕಾರಗಳು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಯಾರೇ ತಪ್ಪು ಮಾಡಿದಾಗ ಎಚ್ಚರಿಸುವುದು ಪತ್ರಿಕಾ ಧರ್ಮ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿರುವ ಕೆಟ್ಟ ಪೋಸ್ಟರ್ ಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಅನಗತ್ಯವಾದ, ಸಮಾಜಕ್ಕೆ ಕೆಟ್ಟು ಮಾಹಿತಿ ನೀಡುವಂತ ಸಂದೇಶಗಳುಳ್ಳ ಸುದ್ದಿ ಮತ್ತು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಕಾರಣಕ್ಕೂ ಅಪ್ ಲೋಡ್ ಮಾಡಬೇಡಿ, ಹಾಗೇ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಸಚಿವರು ಮನವಿ ಮಾಡಿದರು.
ಪತ್ರಿಕಾ ರಂಗವು ಜನಪರವಾದ ಮತ್ತು ಪ್ರಜಾಪ್ರಭುತ್ವ ವಾದವನ್ನು ಎತ್ತಿ ಹಿಡಿಯಬೇಕು. ಧ್ವನಿ ಇಲ್ಲದವರ ಪರ ಕೆಲಸ ಮಾಡಬೇಕು. ಪತ್ರಕರ್ತರ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆಯಬಾರದು ಎಂದು ಅವರು ಎಚ್ಚರಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಲ್ಪಶ್ರೀ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಸರಳ ಸಜ್ಜನಿಕೆಯುಳ್ಳ ರಾಜಕಾರಣಿ ಡಾ.ಪರಮೇಶ್ವರ್, ಇವರಿಗೆ ಎರಡು ಸಲ ಸಿಎಂ ಹುದ್ದೆ ಕೈ ತಪ್ಪಿದೆ. ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಮುಖ್ಯಮಂತ್ರಿ ಆಗುವ ಅವಕಾಶ ಸದ್ಯದಲ್ಲೇ ಬರುವ ಸಾಧ್ಯತೆ ಇದೆ. ಪರಮೇಶ್ವರ್ ಅವರು ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಮುನ್ನಡೆಸಬೇಕು ಎಂದು ಅವರು ಆಶಿಸಿದರು.
ಎರಡು ಸಲ ಸಿಎಂ ಪದವಿ ಕಳೆದುಕೊಂಡ ನತದೃಷ್ಟ ವ್ಯಕ್ತಿ ಪರಮೇಶ್ವರ್. ಈಗ ಮತ್ತೇ ಸಿಎಂ ಆಗುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು.
ಪತ್ರಕರ್ತರು ನೈತಿಕತೆ ಮತ್ತು ಬದ್ಧತೆಯಿಂದ ವೃತ್ತಿ ಮಾಡಬೇಡು. ಒಂದು ಸಂಘಟನೆ ಕಟ್ಟುವುದು ಬಹಳ ಕಷ್ಟ, ಎಲ್ಲ ಕಡೆ ಗೊಂದಲ, ಭಿನ್ನಾಭಿಪ್ರಾಯಗಳು ಇರುವಂತೆ ಪತ್ರಕರ್ತರ ಸಂಘಟನೆಯಲ್ಲೂ ಇದೆ. ಇದನ್ನೆಲ್ಲ ಬದಿಗೊತ್ತಿ ನೈತಿಕವಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಪತ್ರಿಕೆಗಳು ರೈತರ ಪರವಾಗಿಲ್ಲ ಎನ್ನುವ ಅಪವಾದ ಇತ್ತು. ಇದನ್ನ ಹೋಗಲಾಡಿಸುವ ಸಲುವಾಗಿ ತಿಪಟೂರಿನಲ್ಲಿ ಕಾರ್ಯನಿತರ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ತಿಪಟೂರಿನಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಉದ್ದೇಶ ಈ ಕಲ್ಪತರ ನಾಡನ್ನು ದೇಶಕ್ಕೆ ಪರಿಚಯಿಸಬೇಕಿತ್ತು. ಹಾಗಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.ತಿಪಟೂರು ಶಾಸಕ ಕೆ.ಷಡಕ್ಷರಿ ಬೃಹತ್ ನಾಣ್ಯ ಮತ್ತು ಅಂಚೆಚೀಟಿ ಪ್ರದರ್ಶನ ಮತ್ತು ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿದರು.
ರಾಷ್ಟ್ರೀಯ ಮಂಡಳಿಯ ಮಹಾ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಉಪಾಧ್ಯಕ್ಷ ಹೇಮಂತ ತಿವಾರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮದನ್ ಗೌಡ, ತಿಪಟೂರು ನಗರಸಭೆ ಅಧ್ಯಕ್ಷ ಯಮುನಾ ಧರಣೇಶ್, ತಿಪಟೂರು ಕೃಷ್ಣ, ಡಾ.ಜಿ.ಎಸ್.ಶ್ರೀಧರ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಚಿತ್ರದುರ್ಗ ಜಿಲ್ಲೆಯಿಂದ ಭಾರತೀಯ ಕಾರ್ಯನಿರತ ಪತ್ರಕರ್ತರ ಮಂಡಳಿ ಸದಸ್ಯರಾದ ಹರಿಯಬ್ಬೆ ಸಿ.ಹೆಂಜಾರಪ್ಪ, ಎಂ.ಎನ್.ಅಹೋಬಲಪತಿ, ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಸಿ.ಎನ್.ಕುಮಾರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳ ರಾಷ್ಟ್ರೀಯ ಮಂಡಳಿಯ ಸದಸ್ಯರುಗಳು, ಪತ್ರಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ-ಅತ್ಯಂತ ಹಿರಿಯರು, ವಿಶ್ರಾಂತ ಜೀವನ ಮಾಡುತ್ತಿರುವ ಪತ್ರಕರ್ತರಾದ ಕೆ.ಸೋಮಶೇಖರ್, ಎಸ್.ಸೋಮಶೇಖರ್, ಪಾಲಾಕ್ಷ ಬೆಸ್ತರ್, ಕೇಶವಮೂರ್ತಿ, ವೆಂಕಟೇಶ್, ಆನಂದ್, ಸಿದ್ದರಾಮಪ್ಪ, ಶಿವನಂಜಪ್ಪ, ಸತ್ಯನಾರಾಯಣ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.