ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಕೃತಕ ಬುದ್ದಿಮತ್ತೆಯು(ಎ.ಐ) ನಮ್ಮ ಗತಿಸಿದ ಭಾರತೀಯ ಐತಿಹಾಸಿಕ ಸನ್ನಿವೇಶಗಳನ್ನು ಮರುಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಶ್ರೀಲಂಕಾ ಕೊಲಂಬಿಯಾ ವಿಶ್ವವಿದ್ಯಾಲಯ ರಾಷ್ಟ್ರೀಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಆರ್.ಸಿ.ಜಿ ಗಮಗೆ ಅಭಿಪ್ರಾಯಪಟ್ಟಿದ್ದಾರೆ.
ಶೇಷಾದ್ರಿಪುರಂ ಸಂಜೆ ಕಾಲೇಜು ಗ್ರಂಥಾಲಯ ವಿಭಾಗದ ವತಿಯಿಂದ ಭಾರತೀಯ ಗ್ರಂಥಾಲಯಗಳ ಸಂಘ ಹಾಗೂ ಶ್ರೀಲಂಕಾ ಗ್ರಂಥಾಲಯಗಳ ಸಂಘಗಳ ಸಹಯೋಗದಲ್ಲಿ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ” ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಸಂಶೋಧನಾ ಪ್ರಬಂಧ ಬರೆಯಲು ಹಾಗೂ ಪರಿಣಾಮಕಾರಿ ಬೋಧನೆ ಕೈಗೊಳ್ಳಲು ಸಹಾಯಕವಾಗಿದೆ. ಕೃತಕ ಬುದ್ಧಿಮತ್ತೆಗೆ ಸಂವೇದನೆಗಳಿಲ್ಲ. ಆದರೆ ಸನ್ನಿವೇಶಗಳನ್ನು ಸೃಸ್ಟಿಸುತ್ತದೆ, ಕೃತಕ ಬುದ್ದಿಮತ್ತೆಯನ್ನು ಬಳಸಿ ಸಂವೇದನೆಗಳನ್ನು ತುಂಬಬಲ್ಲ ಸಾಮರ್ಥ್ಯವು ಮನುಷ್ಯನ ಸಾಧ್ಯತೆಯಾಗಿದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಶೈಕ್ಷಣಿಕ ಗ್ರಂಥಾಲಯಗಳು ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಮಾದರೀ ಗ್ರಂಥಾಲಯಗಳನ್ನಾಗಿ ರೂಪಿಸಬೇಕಿದೆ. ಶೇಷಾದ್ರಿಪುರಂ ಸಂಜೆ ಕಾಲೇಜು ನ್ಯಾಕ್ ‘ಎ’ ಶ್ರೇಯಾಂಕ ಮಾನ್ಯತೆ ಪಡೆದಿದ್ದು ೧೦೦ ಅಂತಾರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣಗಳನ್ನು ಆಯೋಜಿಸಿ ಯಶಸ್ವಿಯಾಗಿದೆ ಎಂದರು.
ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್ ಮಾತನಾಡಿ, ಶೇಷಾದ್ರಿಪುರಂ ಸಂಜೆ ಕಾಲೇಜು ಕರ್ನಾಟಕ ರಾಜ್ಯದ ಸಂಜೆ ಕಾಲೇಜುಗಳಿಗೆ ಮಾದರಿ ಸಂಜೆ ಕಾಲೇಜು ಎನಿಸಿಕೊಂಡಿದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿ ಡಬ್ಲೂ. ಡಿ ಅಶೋಕ್, ರಾಯ್‌ಪುರದ ಕಳಿಂಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಂದ್ರಪ್ಪ, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂನ ಉಪಕುಲಪತಿ ಡಾ.ದೊರೈಸ್ವಾಮಿ, ಶೇಷಾದ್ರಿಪುರಂ ಸಂಜೆ ಕಾಲೇಜಿನ ಆಡಳಿತ ಸಲಹಾ ಮಂಡಳಿಯ ಅಧ್ಯಕ್ಷ ಪಿ.ಸಿ. ನಾರಾಯಣ, ಪ್ರಾಂಶುಪಾಲ ಡಾ.ಎನ್.ಎಸ್. ಸತೀಶ್ ಹಾಗೂ ಅಂತರಿಕ ಗುಣಮಟ್ಟ ಭರವಸಾ ಸಮಿತಿ ಸಂಚಾಲಕ ನಾಗಸುಧ.ಆರ್, ಗ್ರಂಥಪಾಲಕ ಯೋಗಾನಂದ.ಎಸ್.ವಿ, ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ್ ಜಂಗೆ ಮತ್ತಿತರರು ಉಪಸ್ಥಿತರಿದ್ದರು.