ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸುವ ಕಾರ್ಯ ಮಾಡಬೇಕು, ಈ ತಾಲ್ಲೂಕಿನ ಪ್ರತಿಭೆಗಳು ಬೆಳೆಯುವಂತೆ ಶಿಕ್ಷಕರು, ಪೋಷಕರು ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಬೇಕೆಂದು ಆರ್ಯ ವೈಶ್ಯ ವಿದ್ಯಾ ಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ ವಿ.ಅಮರೇಶ್ ಅವರು ಹೇಳಿದರು.
ಅವರು ನಗರದ ವಾಸವಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದ ಜೊತೆಯಲ್ಲಿ ಈ ನಾಡಿನ ಕಲೆ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆ ಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕೆಂದರು.
ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ ಮಾತನಾಡಿ ಪ್ರತಿಭಾ ಕಾರಂಜಿ ಸ್ಪರ್ಧೆ ಪ್ರತಿಭೆಗಳನ್ನು ಹೊರ ತರಲು ಅತ್ಯುತ್ತಮ ಕಾರ್ಯಕಮ. ಮಕ್ಕಳ ವಿವಿಧ ಕಲೆಗಳ ಅನಾವರಣಕ್ಕೆ ಸಾಂಸ್ಕೃತಿಕ ಕಲೆಗಳು ಅನಾವರಣಕ್ಕೆ ವೇದಿಕೆ ಇದಾಗಿದೆ ಎಂದು ತಿಳಿಸಿ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ವಾಗ್ದೇವಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಜಿ. ಶ್ರೀಧರ್ ಮಾತನಾಡಿ ಭಾರತೀಯ ಕಲೆಗಳು ವಿಶ್ವ ಮನ್ನಣೆ ಪಡೆದಿದ್ದು ಮುಂದಿನ ತಲೆಮಾರಿಗೆ ತಿಳಿಯಬೇಕಿದೆ. ನಿಸ್ಪಕ್ಷಪಾತವಾಗಿ ಮಕ್ಕಳಿಗೆ ನ್ಯಾಯ ನೀಡುವಂತೆ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ಸಮನ್ವಯ ಅಧಿಕಾರಿ ತಿಪ್ಪೇರುದ್ರಪ್ಪ, ಅಕ್ಷರದಾಸೋಹ ಅಧಿಕಾರಿ ಮಹೇಶ್ವರರೆಡ್ಡಿ, ಶಿಕ್ಷಕರ ಸಂಘದ ವೆಂಕಟೇಶ್, ಮುಖ್ಯ ಶಿಕ್ಷಕ ಹೆಚ್ ಸಿ ಶರಣಪ್ಪ. ಸಿ.ಆರ್.ಪಿ ಶಿವಾನಂದ್, ರಮೇಶ್ ನಾಯ್ಕ್, ಇಸಿ.ಓ ಚಿದಾನಂದ, ಜಾಫರ್, ಅಶೋಕ್, ರಮೇಶ್, ಮಧುಸೂಧನ್,ಲೋಕಮ್ಮ ಯೋಗೀಶ್ವರ್, ಪ್ರಸನ್ನಕುಮಾರ್ ಮುಂತಾದವರು ಹಾಜರಿದ್ದರು.