ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೆ. 8 ರಂದು ನಗರದ ಅನುಭವ ಮಂಟಪದಲ್ಲಿ ಪತ್ರಿಕಾ ವಿತರಕರ 4ನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪತ್ರಿಕೆಗಳನ್ನು ಹಂಚುವಂತವರನ್ನು ಸರ್ಕಾರ ಕಡೆಗಣಿಸಿದೆ. ಪತ್ರಿಕಾ ಪ್ರತಿನಿಧಿಗಳ ಬೇಡಿಕೆಗಳ ಈಡೇರಿಕೆಗಾಗಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳನ್ನು ನಾಲ್ಕನೇ ಅಂಗ ಎಂದು ಗುರುತಿಸಲಾಗಿದೆ. ಆದರೆ ಮನೆ ಮನೆಗೆ ಪತ್ರಿಕೆಗಳನ್ನು ಹಂಚಿವಂತವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಈ ವರ್ಗವನ್ನು ಸರ್ಕಾರ ಕಡೆಗಣಿಸಬಾರದು, 10 ಕೋಟಿ ರೂ.ಗಳಲ್ಲಿ ಪತ್ರಿಕಾ ಪ್ರತಿನಿಧಿಗಳ ಕ್ಷೇಮಾ ನಿಧಿ ಸ್ಥಾಪಿಸಬೇಕು, ಹಾಗೂ ಪತ್ರಿಕಾ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವವರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಸೆ. 8 ರಂದು ನಡೆಯಲಿರುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಈ ಸಮ್ಮೇಶನದಲ್ಲಿ ಪತ್ರಿಕೆಯ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚರ್ಚಾ ಗೋಷ್ಟಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಬಾಕರ್, ಜಿಲ್ಲೆಯ ಶಾಸಕರುಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತರ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯಾದ್ಯಂತ 40 ಸಾವಿರ ಪತ್ರಿಕಾ ವಿತರಕರಿದ್ದಾರೆ. ಬೆಂಗಳೂರಿನಲ್ಲಿಯೇ ೧೨೦ ಸ್ಥಳಗಳಲ್ಲಿ ಸುಮಾರು ೬೫೦೦ ಮಂದಿ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ, ನಮ್ಮ ಒಕ್ಕೂಟದಲ್ಲಿ 35೦೦ ಜನ ಸದಸ್ಯರಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ 5೦೦ ಜನ ಸದಸ್ಯರಿದ್ದಾರೆ ಎಂದು ಹೇಳಿದರು.
ರಾಜ್ಯ ಮಟ್ಟದ ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 3೦೦೦ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಗೋಷ್ಟಿಯಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಚಳ್ಳಕೆರೆ ತಾ. ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಸಂಘದ ಕುಬೇಂದ್ರಪ್ಪ, ಮೊಳಕಾಲ್ಮೂರು ಅಧ್ಯಕ್ಷ ಮಲ್ಲಿಕಾರ್ಜನ್, ಹಿರಿಯೂರು ಅಧ್ಯಕ್ಷ ನಾಗರಾಜ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ನಾದೂರು ಸೇರಿದಂತೆ ಇತರರು ಭಾಗವಹಿಸಿದ್ದರು.