ಚಂದ್ರವಳ್ಳಿ ನ್ಯೂಸ್, ಬೆಂಗಳೂರು : ಭದ್ರಾವತಿ ನಗರಸಭೆ ಯ ಮೂವರು ಸದಸ್ಯರು, ಬೆಂಗಳೂರಿನಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ನಗರಸಭಾ ಸದಸ್ಯ ವಿ.ಕದಿರೇಶ್, ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಇವರ ಜೊತೆಗೆ ವಿ.ಕದಿರೇಶ್ ಅವರ ಪುತ್ರ, ಬಿಜೆಪಿಯ ಹಿಂದುಳಿದ ವರ್ಗ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್ ಅವರು ಕೂಡ, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಸಿಎಂ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ, , ಮುಖಂಡರಾದ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಸ್ತುತ ಕಾಂಗ್ರೆಸ್ ಸೇರ್ಪಡೆಯಾಗಿರುವ ಮೂವರು ನಗರಸಭಾ ಸದಸ್ಯರು ಬಿಜೆಪಿ ಪಕ್ಷದವರಾಗಿದ್ದಾರೆ. ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ವೇಳೆ, ಈ ಮೂವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷವು ಈ ಮೂವರು ಸದಸ್ಯರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.