ಸರ್ಕಾರಿ ನೌಕರರ, ಅಧಿಕಾರಿಗಳ ಐದು ಮನೆಗಳಲ್ಲಿ ಕಳ್ಳತನ: ಶಿವಮೊಗ್ಗದ ಬಸವನಗುಡಿ ಕ್ವಾಟ್ರಸ್‌ನಲ್ಲಿ ಒಂದೇ ರಾತ್ರಿ ನಡೆದ ಘಟನೆ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಾರಾಂತ್ಯ ಮೂರ್ನಾಲ್ಕು ದಿನ ರಜೆ ಸಿಕ್ಕಿ ಕಾರಣಕ್ಕೆ ಮನೆಗಳಿಗೆ ಬೀಗ ಹಾಕಿ ಸ್ವಂತ ಊರುಗಳಿಗೆ ತೆರಳಿದ್ದ ಕೆಲವು ಸರ್ಕಾರಿ ನೌಕರರಿಗೆ ಮನೆಗಳ್ಳರು ಶಾಕ್ ನೀಡಿದ್ದಾರೆ.

ನಗರದ ಬಸವನಗುಡಿಯ ಪಿಡಬ್ಲುಡಿ ಕ್ವಾಟ್ರಸ್‌ನಲ್ಲಿ ಒಂದೇ ದಿನ ಐದಾರು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ರೇಷ್ಮೆ ಇಲಾಖೆ ಉಪ ನಿರ್ದೇಶಕ ಮುರಳೀಧರ್, ಜಿಲ್ಲಾಧಿಕಾರಿ ಆಪ್ತ ಸಹಾಯಕ ದೀಪಕ್, ಅಪರ ಜಿಲ್ಲಾಧಿಕಾರಿ ಆಪ್ತ ಸಹಾಯಕಿ ಸಂಧ್ಯಾ, ವಾಣಿಜ್ಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ನಂದಿನಿ, ನ್ಯಾಯಾಧೀಶರ ಕಾರು ಚಾಲಕ ಪ್ರಕಾಶ್ ಮನೆಯಲ್ಲಿ ಕಳ್ಳತನವಾಗಿದೆ. ವಾರ್ತಾ ಇಲಾಖೆ ಸಹಾಯಕಿ ಭಾಗ್ಯಾ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನ ನಡೆದಿದೆ.

ಶನಿವಾರ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ಬೀಟ್ ಪೊಲೀಸರು ಕೂಡ ಅತ್ತ ಸುಳಿದಿಲ್ಲ. ಇದನ್ನು ಅರಿತ ಕಳ್ಳರು ಬೆಳಗಿನ ಜಾವ ೨ರಿಂದ ೩ ಗಂಟೆ ಅವಧಿಯಲ್ಲಿ ಮನೆಗಳ ಬಾಗಿಲು ಮುರಿದು ಒಳನುಗ್ಗಿದ್ದು ನಗರದ ಹೃದಯ ಭಾಗದಲ್ಲಿರುವ ಪಿಡಬ್ಲುಡಿ ಕ್ವಾಟ್ರರ್ಸ್‌ನ ಮುಖ್ಯ ರಸ್ತೆ ಪಕ್ಕದ ಮನೆಗಳಲ್ಲಿ ಕೈಚಳಕ ತೋರಿದ್ದಾರೆ.

ಆರು ಮನೆ ಕಳ್ಳತನ, ನಾಲ್ಕು ಎಫ್‌ಐಆರ್ ?

ಆರು ಮನೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಭಾನುವಾರದ ಸಂಜೆವರೆಗೆ ಮುರುಳೀಧರ್, ಸಂಧ್ಯಾ, ನಂದಿನಿ ಮತ್ತು ಪ್ರಕಾಶ್ ಎಂಬುವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕಾಶ್ ಅವರು ಅರಸೀಕೆರೆಗೆ ಹೋಗಿದ್ದು ಮನೆಯಲ್ಲಿದ್ದ ಉಂಗುರ, ಎರಡು ಚೈನು ಹಾಗೂ ೪೫ ಸಾವಿರ ರೂ. ನಗದು ಕಳುವಾಗಿದೆ. ಸಂಧ್ಯಾ ಅವರ ಮನೆಯಲ್ಲಿ ೧.೧೫ ಲಕ್ಷ ರೂ. ನಗದು ಕಳ್ಳತನವಾಗಿದ್ದು ಒಟ್ಟಾರೆ ಎರಡು ಲಕ್ಷ ರೂ.ಗೂ ಅಧಿಕ ನಗದು, ಮೂರು ಉಂಗುರ, ಬೆಳ್ಳಿ ಕಾಯಿನ್, ೩೦೦ ಗ್ರಾಂ ಚಿನ್ನಾಭರಣ ಕಳುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಾಗೂ ಕೆಲವರು ಕೆಲಸದ ಮೇಲೆ ಊರಿಗೆ ಹೋದಾಗ ಕಳ್ಳತನ ನಡೆದಿದೆ. ಈ ನಡುವೆ ವಾರ್ತಾ ಇಲಾಖೆ ಸಹಾಯಕಿ ಭಾಗ್ಯಾ ಅವರ ಮನೆಯಲ್ಲೂ ಕಳ್ಳತನಕ್ಕೆ ಯತ್ನ ನಡೆಸಿದ್ದು ಅದೃಷ್ಟವಶಾತ್ ಚಿನ್ನಾಭರಣ ಮತ್ತು ನಗದು ಕಳ್ಳರ ಕೈಗೆ ಸಿಕ್ಕಿಲ್ಲ.

ಮುಸುಕುಧಾರಿಗಳಿಂದ ಕೃತ್ಯ:

ಕ್ವಾಟ್ರರ್ಸ್‌ನ ಐದಾರು ಮನೆಗಳಿಗೆ ನುಗ್ಗಿರುವ ಮುಸುಕುಧಾರಿಗಳು ಬಿರುವಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕ್ವಾಟ್ರರ್ಸ್‌ನ ಎದುರು ಸಿಸಿ ಕ್ಯಾಮೆರಾದಲ್ಲಿ ಮೂವರು ಮುಸುಕುಧಾರಿಗಳು ಮನೆಗೆ ನುಗ್ಗಿರುವ ದೃಶ್ಯಗಳು ಸೆರೆಯಾಗಿವೆ. ಕಳ್ಳರು ಮೂರ್ನಾಲ್ಕು ಗುಂಪು ಮಾಡಿಕೊಂಡು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಡಿಎಆರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

  ಬಾರದ ಪೊಲೀಸರು :

ಭಾನುವಾರ ಬೆಳಗಿನ ಜಾವ ಕಂಪೌಂಡ್ ಹಾರಿದ ವ್ಯಕ್ತಿಯೊಬ್ಬ ನಮ್ಮ ಮನೆಯ ಕಿಟಕಿಗೆ ಬ್ಯಾಟರಿ ಬಿಟ್ಟರು. ತಕ್ಷಣವೇ ನಾನು ಎಚ್ಚರಗೊಂಡು ಮಗನನ್ನು ಜೋರಾಗಿ ಕೂಗಿದೆ. ಆತ ತಕ್ಷಣವೇ ಕಂಪೌಂಡ್ ಹಾರಿ ಓಡಿ ಹೋದ. ತದ ನಂತರ ೧೧೨ ಮತ್ತು ೧೦೦ಗೆ ಫೋನ್ ಮಾಡಿ ಮಾಹಿತಿ ನೀಡಿದ್ದೆ. ಸ್ಥಳಕ್ಕೆ ಬರುವುದಾಗಿ ಹೇಳಿದ್ದ ಪೊಲೀಸರು ಬಂದಿದ್ದು ಮಾತ್ರ ಬೆಳಗ್ಗೆ ಎಂದು ಮಹಿಳೆ ಮಾಹಿತಿ ನೀಡಿದರು.

- Advertisement -  - Advertisement -  - Advertisement - 
Share This Article
error: Content is protected !!
";