ಗಣೇಶ ಹೋದ ಬೆನ್ನಲ್ಲೇ ಜೋ ಕುಮಾರನ ಅಳಲು ಪ್ರಾರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:

ಇನ್ನು ಜೋ ಕುಮಾರನ ಅಳಲು ಪ್ರಾರಂಭ-ಸಂಗ್ರಹ ಲೇಖನ: ಆರ್. ಮಂಜುನಾಥ್, ಸಾರ್ವಜನಿಕರಲ್ಲಿ ಗಣೇಶೋತ್ಸವ ಮುಗಿಯುತ್ತಿದ್ದಂತೆಯೇ ಜೋಕುಮಾರ ಸ್ವಾಮಿಯನ್ನು ಪೂಜಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಈ ಸಂದರ್ಭದಲ್ಲಿ ಚಂದ್ರವಳ್ಳಿ ಓದುಗರಿಗಾಗಿ ಒಂದು ವಿಶೇಷ ಲೇಖನ…

                                       ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿವ ಜೋಕುಮಾರ ಜೋಕಎಂಬ ಮುನಿಯ, ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗಿರುತ್ತಾನೆ.

ಆತನು ಶಿವನ ಗಣಗಲ್ಲಿರುವವನು, ಆತ ಗಣಪತಿಯೊಂದಿಗೆ ಬರುವನು ಆದರೆ ಈತನಿಗೆ ಕೇವಲ 7 ದಿನಗಳ ಆಯಸ್ಸು ಹೀಗೆ ಎಂದು ಜಾನಪದದಲ್ಲಿ ಅನೇಕ ಕಥೆಗಳಿವೆ.

    ಗ್ರಾಮೀಣರು ಹೇಳಿಕೊಳ್ಳುವಂತೆ ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂದು ಕಥೆಗಳಲ್ಲಿ ಉಲ್ಲೇಖವಾಗಿವೆ.

   ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನು ಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಆತನನ್ನು ಇಷ್ಟ ಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬ ಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.

ಮೂರ್ತಿ ನಿರ್ಮಾಣ:
ಇಂಥ ಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ ಮಣ್ಣಿನಿಂದ ತಿದ್ದಿ,ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನ ದೊಂದಿಗೆ ಎಲೆ, ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟು ಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ.   

   ಊರಿನ ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆ ಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.

ಮೆರವಣಿಗೆ:
ವಾಲ್ಮಿಕಿ, ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿ ಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. 

     ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿಎಲ್ಲವೂ ಬರುತ್ತವೆ. ಮನೆಯವರು ಮೊರದಲ್ಲಿ ಕೊಡುವ ಜೋಳಕ್ಕೆ ಪ್ರತಿಯಾಗಿ ಅದೇ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. 

    ಇದನ್ನು ಪಡೆದುಕೊಂಡ ಮನೆಯವರು ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.

 ಚವತಿ ಚಂದ್ರನ ರೀತಿ ಈತನಿಗೂ ಶಾಪ ;
ಮಧ್ಯರಾತ್ರಿಯನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. 

    ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮರದ ಮುಳ್ಳಿನ ಕಂಟಿಗಳನ್ನಿಟ್ಟಿರುತ್ತಾರೆ.

ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)-
    ವೇಶ್ಯೆಯರು ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಜಗ್ಗಿದಾಗ ಜೋಕುಮಾರ ನಮ್ಮನ್ನು ಹಿಡಿದು ಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಬಡಿದು ಕೊಳ್ಳ ತೊಡಗುತ್ತಾರೆ. 

    ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒನಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ. ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿ ಕೊಳ್ಳುತ್ತಾನೆ. ಮರಳಿ ಕಣ್ಣು ಕಳೆದುಕೊಂಡು ತನ್ನ ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟಣದ ಜಾಪಾನ ತೋಟದಲ್ಲಿರುವ ಬಾವಿಯಲ್ಲಿ ಎಸೆಯುವುದು ಸಂಪ್ರದಾಯವಾಗಿದೆ.

     ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚ ರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.

 ಜೋಕುಮಾರನ ಅಳಲು(ಶ್ರಾದ್ಧಾ) ;
 ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ -ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡು ಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ -ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದದಲ್ಲಿ ಸ್ವಯಂಘೋಷಿತ ವಿಶೇಷ ಕಟ್ಟಳೆಯಿದೆ.

ಜೋಕುಮಾರನ ಮರೆಯುವುದು:
ಜೋಕುಮಾರನ ಮರಣದ ನಂತರ ಮೂರ್ತಿಯನ್ನು ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ.

     ಆ ಮೇಲೆ ಮೂರು ದಿನಗಳ ಕಾಲ ಊರಿನಲ್ಲಿನಲ್ಲಿರುವ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ ದಿನಮಾಡಿ ಮುಗಿಸಿ ನಂತರ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";