ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಡೆ ವಿರೋಧಿಸಿ ಸೆ.14ರಂದು ಬೃಹತ್ ಪ್ರತಿಭಟನೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಜಾಪ್ರಭುತ್ವದಲ್ಲಿ ಒಕ್ಕೂಟ ವ್ಯವಸ್ಥೆ ರಕ್ಷಿಸದಿದ್ದರೆ ಸಂವಿಧಾನ ಉಳಿಯುವುದಿಲ್ಲ. ಬಹುತ್ವ ಭಾರತದಲ್ಲಿ ಧರ್ಮವನ್ನು ಗುರಿಯಾಗಿಸಿಕೊಂಡು ಹತ್ತು ವರ್ಷಗಳಿಂದಲೂ ಆಕ್ರಮಣ ನಡೆಸುತ್ತಿರುವ ಕೇಂದ್ರದ ಸರ್ವಾಧಿಕಾರಿ ನಡೆ ವಿರೋಧಿಸಿ ಸೆ.೧೪ ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿದ್ದ ಆತಂಕಕ್ಕಿಂತ ಈಗ ಭಿನ್ನವಾಗಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಇಡಿ ಒಕ್ಕೂಟದ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟಿದೆ. ಪ್ರಶ್ನೆ ಮಾಡಲು ವಿರೋಧ ಪಕ್ಷದವರೆ ಇರಬಾರದೆನ್ನುವ ರೀತಿಯಲ್ಲಿ ವರ್ತಿಸುತ್ತಿದೆ.
ರಾಷ್ಟ್ರಪತಿ, ರಾಜ್ಯಪಾಲರುಗಳನ್ನು ನಾಮಕಾವಸ್ಥೆಗಷ್ಟೆ ಇಟ್ಟುಕೊಂಡಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆಯನ್ನು ತೂಗಿಸಿಕೊಂಡು ಹೋಗಬೇಕಾಗಿರುವ ರಾಜ್ಯಪಾಲರು ಕೀ ಕೊಟ್ಟ ಗೊಂಬೆಯಂತೆ ಕುಣಿಯುತ್ತ ಸಂವಿಧಾನಾತ್ಮಕ ನಡೆಯನ್ನು ಎಲ್ಲಿಯೂ ತೋರಿಸದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿ ರಾಷ್ಟ್ರ ಭಾಷೆಯಲ್ಲ. ತ್ರಿಭಾಷ ಸೂತ್ರವನ್ನು ಒಪ್ಪಿಕೊಂಡಿರುವುದರಿಂದ ಭಾಷೆಯ ಜೊತೆ ಬದುಕು ಕಳೆದುಕೊಳ್ಳುತ್ತಿದ್ದೇವೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾಗಿರುವವರು ನಮ್ಮ ಪಾಲಿನ ಹಕ್ಕು ಕೇಳದಷ್ಟು ದುರ್ಬಲರಾಗಿದ್ದಾರೆ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು. ಆದರೆ ಇಂದು ಬ್ಯಾಂಕ್‌ಗಳಲ್ಲಿ ಕುಳಿತಿರುವವರೆಲ್ಲಾ ಹೊರ ರಾಜ್ಯದವರೆ. ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿದೆ. ವಿಲೀನಿಕರಣದ ಹೆಸರಿನಲ್ಲಿ ಉದ್ಯೋಗ ಕಿತ್ತುಕೊಳ್ಳುತ್ತಿರುವ ಇಂದಿನ ಅಪಾಯಕಾರಿ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಯಿಂದ ಭಾಷೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಐಟಿ, ಇಡಿ, ಸಿಬಿಐ.ಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಜನಸಾಮಾನ್ಯರನ್ನು ಎಚ್ಚರಿಸುವುದಕ್ಕಾಗಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಸಮಾನ ಮನಸ್ಕರು, ಯುವ ಸಮೂಹ, ರೈತರು, ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮನವಿ ಮಾಡಿದರು.
ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಅನ್ಯಾಯ, ಆಕ್ರಮಗಳನ್ನು ಯಾರು ಪ್ರಶ್ನಿಸುತ್ತಾರೋ ಅಂತಹವರನ್ನು ಕೇಂದ್ರ ಸರ್ಕಾರ ಧಮನ ಮಾಡಲು ಹೊರಟಿದೆ. ಮೂರು ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ ಲಕ್ಷಾಂತರ ರೈತರು ಒಂದು ವರ್ಷಗಳಿಗೂ ಹೆಚ್ಚು ಕಾಲ ಧರಣಿ ನಡೆಸಿದರೂ ಕೇಂದ್ರ ಸರ್ಕಾರ ಇಂದಿಗೂ ಚಕಾರವೆತ್ತುತ್ತಿಲ್ಲ. ದೇಶಕ್ಕೆ ಅನ್ನ ನೀಡುವ ರೈತ ಅಪಾಯದಲ್ಲಿದ್ದಾನೆ. ಮಹಿಳೆಯರ ಮೇಲೆ ಅತ್ಯಾಚಾರ ಕೊಲೆಯಾಗುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಮೊದಲ ಬಾರಿಗೆ ಪ್ರಧಾನಿಯಾಗುವ ಮುನ್ನವೆ ನರೇಂದ್ರಮೋದಿ ನೀಡಿದ ಭರವಸೆಗಳೆಲ್ಲಾ ಹುಸಿಯಾಗಿದೆ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ರೈತರು, ದಲಿತರು, ಕನ್ನಡಪರ ಸಂಘಟನೆಗಳ ಜೊತೆ ಚರ್ಚಿಸಿ ಇದೆ ತಿಂಗಳ ಹದಿನಾಲ್ಕರಂದು ಪ್ರತಿಭಟನಾ ಸಭೆ ನಡೆಸುತ್ತಿದ್ದೇವೆ. ಜಸ್ಟಿಸ್
ಗೋಪಾಲಗೌಡ, ನಾಗಮೋಹನ್‌ದಾಸ್, ದೇವನೂರು ಮಹದೇವ ಇವರುಗಳು ಪ್ರತಿಭಟನಾ ಸಭೆಯ ನೇತೃತ್ವ ವಹಿಸಲಿದ್ದಾರೆಂದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡುತ್ತ ರಾಷ್ಟ್ರೀಯತೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜ್ಯದ ಹಿತದೃಷ್ಟಿಯ ವಿಚಾರವಾಗಿ ಸಂಸದರು ಒಮ್ಮೆಯೂ ಸಂಸತ್‌ನಲ್ಲಿ ಧ್ವನಿ ಎತ್ತದಷ್ಟು ಅಸಹಾಯಕರಾಗಿದ್ದಾರೆ. ರಾಜ್ಯದ ಪಾಲಿನ ಹಕ್ಕು ಕೇಳಬೇಕಾದರೆ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗಿದೆ. ಸರ್ವಾಧಿಕಾರಿ ಹಿಟ್ಲರ್‌ನಂತೆ ವರ್ತಿಸುತ್ತಿರುವ ಕೇಂದ್ರದಿಂದ ಒಕ್ಕೂಟದ ವ್ಯವಸ್ಥೆ ನಾಶವಾಗಲು ಬಿಡಬಾರದೆಂಬ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಹೇಳಿದರು.
ಪ್ರೊ.ರುದ್ರಪ್ಪ ಹನಗವಾಡಿ, ರೈತ ಮುಖಂಡರುಗಳಾದ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜಿ.ಎಸ್.ಉಜ್ಜಿನಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.