ಬಿಜೆಪಿ ವಿರುದ್ಧ ಸಮಗ್ರ ತನಿಖೆ ಮಾಡಲು ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ಹಗರಣದ ವಿರುದ್ಧ ಹೋರಾಟ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆಕಟ್ಟಬೇಕೆಂದು ತೀರ್ಮಾನ ಮಾಡಿದ್ದ ಬಿಜೆಪಿಗೆ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ.

ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಡೆಸಿದ್ದ ಹಲವು ಹಗರಣಗಳನ್ನು ತನಿಖೆಗೆ ವಹಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಕೆಲ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ಸರ್ಕಾರದ ಹಲವು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟಕ್ಕೆ ಇಳಿದಿದ್ದ ಬಿಜೆಪಿ ನಾಯಕರಿಗೆ ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣ ಉರುಳಾಗುವ ಸಾಧ್ಯತೆ ಇದೆ.

ಭ್ರಷ್ಟಾಚಾರ ಆರೋಪ ಹೊತ್ತ ಬಿಜೆಪಿ ನಾಯಕರ ವಿರುದ್ಧದ ತನಿಖೆ ಚುರುಕುಗೊಳಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದ ಅಕ್ರಮಗಳು ಕುರಿತು ತನಿಖೆ ನಡೆಸಲು ಐವರು ಸಚಿವರ ಸಮಿತಿ ರಚಿಸಿ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.ಬಿಜೆಪಿ ಆಡಳಿತ ಅವಧಿಯಲ್ಲಿ 26 ಹಗರಣಗಳು ನಡೆದಿದ್ದು ಅವುಗಳ ಸಮಗ್ರ ತನಿಖೆ ನಡೆಸಲು ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿ ಆದೇಶಿಸಿದ್ದಾರೆ.

ಸಚಿವರಾದ ಹೆಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳ ಒಳಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಸಮಿತಿಗೆ ಆದೇಶಿಸಲಾಗಿದೆ. ಈ ಸಮಿತಿಯು ಮುಂದಿನ ಎರಡು ತಿಂಗಳುಗಳ ಒಳಗೆ ತನಗೆ ವಹಿಸಿರುವ ಜವಾಬ್ದಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.  

- Advertisement -  - Advertisement -  - Advertisement - 
Share This Article
error: Content is protected !!
";