Ad imageAd image

ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ತರಬೇತಿ ಅಧಿಕಾರಿಗಳ ಸೂಕ್ತ ನಿರ್ವಹಣಾ ಕೊರತೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿಯು ಅಧಿಕಾರಿಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಹಾದಿ ತಪ್ಪುತ್ತಿದೆ.

 ನಗರದ ಅರಳು ಮಲ್ಲಿಗೆ ಬಾಗಿಲು ಸಮೀಪವಿರುವ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವಿಶ್ವಕರ್ಮ ಯೋಜನೆಯ ತರಬೇತಿ ನೀಡಲಾಗುತ್ತಿದೆ. ದೀಪಕ್ ಎಂಬುವವರು ತರಬೇತಿ ಕಾರ್ಯಕ್ರಮದ ಗುತ್ತಿಗೆ ಪಡೆದಿದ್ದು, ಫಲಾನುಭವಿಗಳಿಗೆ ಯಾವುದೇ ಸಮರ್ಪಕ ತರಬೇತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ.

 ಜನರನ್ನು ತರಬೇತಿ ಕೇಂದ್ರಕ್ಕೆ ಕರೆಸಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ದಿನಪೂರ್ತಿ ಅಲ್ಲೇ ಇರಿಸಿಕೊಂಡು ಯಾವ ತರಬೇತಿಯೂ ನೀಡದೇ ಮನೆಗೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿ ಮಹಿಳೆಯೊಬ್ಬರು ಆರೋಪಿಸಿದರು.

 ವಿಶ್ವಕರ್ಮ ಯೋಜನೆ ತರಬೇತಿ ಕುರಿತು ಕೇಳಿಬಂದ ಆರೋಪಗಳಿಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಧ್ಯಮ ಪ್ರತಿನಿಧಿಗಳಿಗೂ ಎಲ್ಲವೂ ಸರಿಯಿಲ್ಲ ಎಂಬುದು ಅರಿವಿಗೆ ಬಂತು.

 ಬುಟ್ಟಿ ನೇಯ್ದೆ ತರಬೇತಿಯು ಕೇವಲ ಲಾಗಿನ್, ಲಾಗ್‌ಔಟ್ ಗೆ ಮಾತ್ರ ಸೀಮಿತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೂರು ದಿನಗಳಿಂದ ಇಲ್ಲಿನ ತರಬೇತಿ ಕೇಂದ್ರದಲ್ಲಿ ಬುಟ್ಟಿ ನೇಯ್ಕೆ ತರಬೇತಿ ನಡೆಯುತ್ತಿದ್ದು ಯಾವುದೇ ರೀತಿಯ ತರಬೇತಿ ನೀಡದೇ ಬೆಳಿಗ್ಗೆ ಸಂಜೆ ಲಾಗಿನ್, ಲಾಗ್ ಔಟ್ ಮಾಡಿಸಿಕೊಂಡು ಮನೆಗೆ ಕಳುಹಿಸಲಾಗುತ್ತಿದೆ ಎಂದು ತರಬೇತಿ ಪಡೆಯುವವರು ತಿಳಿಸಿದರು.

 ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಕೇಳಿದಾಗ, ತಾಂತ್ರಿಕ ದೋಷ ಇದೆ. ಆದ್ದರಿಂದ ಹೀಗೆ ಆಗುತ್ತಿದೆ ಎಂದು ಹಾರಿಕೆ ಉತ್ತರ ನೀಡಿದರು. ಕುಶಲಕರ್ಮಿಗಳಿಗೆ ಬೂಸ್ಟರ್ ಡೋಸ್ ಆಗಬೇಕಿದ್ದ ಈ ಯೋಜನೆ ಆರಂಭಗೊಂಡು ಬರೋಬ್ಬರಿ ಒಂದು ವರ್ಷ ಕಳೆದರೂ ಯೋಜನೆ ಸರಿಯಾಗಿ ಟೇಕಾಫ್ ಆಗದೇ ಹಳ್ಳ ಹಿಡಿದಿದೆ.

 ಯೋಜನೆಯಡಿ ಗುರುತಿಸಿರುವ 18 ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಪೈಕಿ ಕೇವಲ 2ಕ್ಕೆ ಮಾತ್ರ ತರಬೇತಿ ಸಿಗುತ್ತಿದೆ. ಬಹುತೇಕ ಕೌಶಲ್ಯ ತರಬೇತಿಗಳಿಗೆ ತರಬೇತುದಾರರೇ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದೆ.

 ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸೇರಿದಂತೆ ನಂಬಂಧಿಸಿದ ಇಲಾಖೆಯ ಅಧಿಕಾರಿಗಳ ತರಬೇತಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಅಲ್ಲದೆ ತರಬೇತಿ ಕೇಂದ್ರಗಳ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ವಶಕ್ಕೆ ಪಡೆದು, ನೀಡಲಾದ ತರಬೇತಿ ಏನು.? ಭಾಗಿಯಾದ ಫಲಾನುಭವಿಗಳು ಎಷ್ಟು..? ತರಬೇತುದಾರರು ಯಾರು..? ಎಂಬ ಕುರಿತು ತನಿಖೆ ನಡೆಸಿ, ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರಾದ ಮೃತ್ಯುಂಜಯ ಹೇಳಿದ್ದಾರೆ.

 

- Advertisement -  - Advertisement - 
Share This Article
error: Content is protected !!
";