ಕ್ರೀಡೆಗಳಿಂದ ಶಿಸ್ತು ಹಾಗೂ ಆರೋಗ್ಯ ಸುಧಾರಣೆ- ಪುಟ್ಟಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಕ್ರೀಡಾ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡುವುದರ ಜೊತೆಗೆ ಆರೋಗ್ಯವು ವೃದ್ಧಿಸುತ್ತದೆ. ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ನಡೆ ಹಾಗೂ ಗುಣಗಳನ್ನು ರೂಢಿಸಿಕೊಳ್ಳಬಹುದು ಎಂದು ಪಿಯು ಉಪನಿರ್ದೇಶಕ ಪುಟ್ಟಸ್ವಾಮಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಶಿಸ್ತು ಪಾಲಿಸುವುದು ಮುಖ್ಯ. ಈ ಮೂಲಕ ಕ್ರೀಡೆಯಲ್ಲಿ ಮೈಲಿಗಲ್ಲನ್ನು ಸಾಧಿಸಲು ಸಾಧ್ಯ. ಕ್ರೀಡಾ ಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಸಾಮಾರ್ಥ್ಯಗಳನ್ನು ಪ್ರದರ್ಶಿಸುವ ಮೂಲಕ ಮುಂದೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಪ್ರತಿನಿಧಿಸುವಂತಾಗಬೇಕು ಎಂದು ಕ್ರೀಡಾಪಟುಗಳಿಗೆ ಪುಟ್ಟಸ್ವಾಮಿ ಕಿವಿ ಮಾತು ಹೇಳಿದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು, ದೇಹವನ್ನು ಬಲಿಷ್ಠವಾಗಿಸುವ ಏಕಮಾತ್ರ ಮಾರ್ಗವಾಗಿದೆ. ಕ್ರೀಡೆಯು ದೇಹವನ್ನು ಸದೃಢವಾಗಿಸುವುದರ ಜೊತೆಗೆ ಮಾನಸಿಕವಾಗಿ ನಮ್ಮ ಗುರಿಯನ್ನು ಸಾಧಿಸುವ ಚಿಂತನೆ ನೀಡುತ್ತದೆ ಎಂದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಹೆಚ್.ಬಿ.ನರಸಿಂಹಮೂರ್ತಿ ಸ್ವಾಗತಿಸಿದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಯ ಉಪನ್ಯಾಸಕ ಡಾ.ಬಿ.ಕೃಷ್ಣಪ್ಪ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಬೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಮ್ಮದ್ ರಿಜ್ವಾನ್, ಇಂದ್ರಣ್ಣ, ಬಸವರಾಜಪ್ಪ ಹಾಗೂ ಸಿದ್ದರಾಮಣ್ಣ ಅವರಿಗೆ ಸನ್ಮಾನಿಸಲಾಯಿತು.

ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಎರಡು ದಿನಗಳ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿದ್ದು, ಗುಂಪು ಆಟಗಳಾದ ಫುಟ್‌ಬಾಲ್, ವಾಲಿಬಾಲ್, ಥ್ರೋಬಾಲ್, ಕಬ್ಬಡಿ, ಕೋಕೋ, ಬಾಸ್ಕೆಟ್ ಬಾಲ್ ಆಟಗಳು ನಡೆದವು. ಸೆ.12ರಂದು ಗುರುವಾರ ಬೆಳಿಗ್ಗೆ 6ಕ್ಕೆ ಬಾಲಕ, ಬಾಲಕಿಯರ ಗುಡ್ಡಗಾಡು ಓಟ ಹಾಗೂ ಬೆಳಿಗ್ಗೆ 9ಕ್ಕೆ ಆಥ್ಲೇಟಿಕ್ಸ್ ಕ್ರೀಡೆಗಳ ನಡೆಯಲಿವೆ.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆರ್.ಮಂಜುನಾಥ್, ಎನ್.ನರಸಿಂಹಮೂರ್ತಿ, ಬಿ.ಆರ್.ಶಿವಕುಮಾರ್, ಮಹೇಶ್ ಬಾಬು, ಉಪನ್ಯಾಸಕ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ಕ್ರೀಡಾ ಸಂಚಾಲಕ ಎ.ಎಸ್.ರಂಗಪ್ಪ ಸೇರಿದಂತೆ ಜಿಲ್ಲೆಯ 6 ತಾಲ್ಲೂಕಿನ ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";