ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಜಾಸ್ತಿ ಇದ್ದು ನಕಲಿ ವೈದ್ಯರ ಹಾವಳಿ ತಡೆಯಲು ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದಲ್ಲದೆ ಅಯುಷ್ ವೈದ್ಯರು ಕ್ಲಿನಿಕ್ ಮುಂದೆ ಗ್ರೀನ್ ಬೋರ್ಡ್ ಮತ್ತು ಆಲೋಪಥಿ ವೈದ್ಯರು ನೀಲಿ ಬೋರ್ಡ್ ಹಾಕೋದು ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಸಮೀಪದ ಗೋಕಾಕ್‌ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಗುಂಡೂರಾವ್, ನಕಲಿ ವೈದ್ಯರು ಮತ್ತು ಕ್ಲಿನ್ ಗಳನ್ನು ಹುಡುಕಿ ಅವರ ಕ್ಲಿನಿಕ್ ಬಂದ್ ಮಾಡಿಸಲಾಗುತ್ತದೆ ಅಲ್ಲದೆ ಅಂತಹ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಮಾಡಲಾಗಿದೆ. ಹಲವಾರು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹಳೆಯ ವೈದ್ಯಕೀಯ ಪದ್ಧತಿಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ನಕಲಿ ವೈದ್ಯರ ಸಮಸ್ಯೆ ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ, ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದವು. ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷಕರು ಹಾಗೂ ಇತರೆ ಅಗತ್ಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಸಚಿವರು ಭರವಸೆ ನೀಡಿದರು.
ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ಪಕ್ಷಗಳನ್ನು ಒಡೆದು ಆಪರೇಷನ್ ಕಮಲ ನಡೆಸುವುದು ಬಿಜೆಪಿಗೆ ಅಭ್ಯಾಸವಾಗಿದೆ. ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರದಿಂದ ಹಣ ಪಡೆಯಲು ಬಿಜೆಪಿ ನಾಯಕರಿಗೆ ಆಸಕ್ತಿಯಿಲ್ಲ. ಎಲ್ಲೆಂದರಲ್ಲಿ ಅವ್ಯವಸ್ಥೆ ಸೃಷ್ಟಿಸುವ ಕಾರ್ಯದಲ್ಲಿ ಅವರೆಲ್ಲ ತೊಡಗಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕರೂ ಉನ್ನತ ಹುದ್ದೆಗೆ ಪೈಪೋಟಿ ನಡೆಸಿಲ್ಲ ಎಂದು ತಿಳಿಸಿದರು.
ಬಿಜೆಪಿ ನಾಯಕರು ರಾಜಕೀಯವಾಗಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗುಂಡೂರಾವ್ ಆರೋಪಿಸಿದರು.
ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ,ಮುರುಗೇಶ್ ನಿರಾಣಿ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.