ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾದಕ ವ್ಯಸನದ ದಾಸರಾದರೆ ಬದುಕಿರುವಾಗಲೇ ನರಕಯಾತನೆ, ಚಿತ್ರಹಿಂಸೆ ಅನುಭವಿಸಬೇಕಾಗುತ್ತದೆ. ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲದೇ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಡೇಟ್ ಚಾರಿಟೇಬಲ್ ಸೊಸೈಟಿ ಸಹಯೋಗದಲ್ಲಿ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳ ಕುರಿತು ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳಲ್ಲಿ ಮೆದುಳಿನಲ್ಲಿ ಕ್ಷಣಿಕ ಸುಖ ನೀಡುವ ಹಾರ್ಮೋನ್ನನ್ನು ಬಿಡುಗಡೆಗೊಳಿಸುವ ಹಾನಿಕಾರಕ ರಾಸಾಯನಿಕಗಳಿದ್ದು, ಇವುಗಳು ಮನುಷ್ಯನನ್ನು ಮಾದಕ ವಸ್ತುಗಳ ವ್ಯಸನಕ್ಕೆ ದಾಸನನ್ನಾಗಿ ಮಾಡಿಸುತ್ತವೆ. ಮಾದಕ ವಸ್ತುಗಳ ವ್ಯಸನೆಯಿಂದ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಬರುವುದರಿಂದ ಉತ್ತಮ ಆರೋಗ್ಯದ ಹಿತದೃಷ್ಠಿಯಿಂದ ಮಾದಕ ವಸ್ತುಗಳಿಂದ ದೂರವಿರಬೇಕು. ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡು, ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಸಂದೇಶವನ್ನು ತಲುಪಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ದುಶ್ಚಟಗಳಿಗೆ ಒಳಗಾಗದೆ, ತಮ್ಮ ವಿಧ್ಯಾಭ್ಯಾಸ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.
ಡೇಟ್ ಚಾರಿಟೇಬಲ್ ಟ್ರಸ್ಟ್ನ ಗಾಯಿತ್ರಿ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಹದಿಹರೆಯ ವಿದ್ಯಾರ್ಥಿಗಳಾಗಿದ್ದು, ಇವರಲ್ಲಿ ಹೆಚ್ಚಿನ ಕುತೂಹಲ, ಅನುಕರಣೆ, ಸೆಳೆತ ಹೆಚ್ಚಾಗಿರುತ್ತದೆ. ಒಳ್ಳೆಯದು, ಕೆಟ್ಟದು ಎಂಬುವುದು ತಿಳಿಯದ ವಯಸ್ಸು. ಹಾಗಾಗಿ ನಿಮಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಜಾಹೀರಾತುಗಳನ್ನು ನೋಡಿ ಪ್ರಭಾವಿತರಾಗಿ, ಕ್ಷಣಿಕ ಸುಖಕ್ಕೆ ಬಲಿಯಾಗಬೇಡಿ. ಕುತೂಹಲ, ಆಕರ್ಷಣೆಯಿಂದ ಶುರು ಮಾಡಿದ ಕ್ಷಣಿಕ ಕಾಲದ ಕಿಕ್ ಅದು ಹವ್ಯಾಸವಾಗಿ ಬದಲಾವಣೆಯಾಗುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕ, ಸಾಮಾಜಿಕವಾಗಿ ಬಹಳ ದೊಡ್ಡ ಪರಿಣಾಮ ಬೀರಲಿದೆ. ಹಾಗಾಗಿ ಯುವ ಜನತೆ ತಮ್ಮ ಮನಸ್ಸನ್ನು ಒಳ್ಳೆಯದರ ಕಡೆ ಗಮನಹರಿಸಬೇಕು. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹೆಚ್.ಬಿ.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಕಡೆ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ದುಶ್ಚಟಗಳಿಗೆ ಬಲಿಯಾದವರ ಬದುಕು ನಿಜಕ್ಕೂ ನರಕಯಾತನೆಯ ಪರಿಸ್ಥಿತಿಯಾಗಿದೆ. ನನ್ನ ಅಂತಿಮ ದಿನದವರೆಗೂ ಮಾದಕ ವಸ್ತುಗಳಿಗೆ ದಾಸರಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಶಪಥ ಮಾಡಬೇಕು ಎಂದು ತಿಳಿಸಿದ ಅವರು, ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕುಟುಂಬ ಹಾಗೂ ನೆರೆಹೊರೆಯವರೆಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭೀಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ಸರ್ಕಾರದ ವತಿಯಿಂದ ವ್ಯಸನಮುಕ್ತ ದಿನಾಚರಣೆಯನ್ನಾಗಿ ಕಳೆದ ಆಗಸ್ಟ್ 01ರಂದು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಮಟ್ಟಗಳಲ್ಲಿಯೂ ಆಚರಿಸಲಾಗಿದೆ. ಯುವ ಜನತೆಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ, ದುಶ್ಚಟಗಳಿಂದ ದೂರವಿರಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಾಲಕರ ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕರಾದ ರಾಘು, ಚನ್ನಬಸಪ್ಪ, ಡಾ.ಗುರುನಾಥ್, ಶಶಿಧರ್ ಸೇರಿದಂತೆ ಪಿಯು ವಿದ್ಯಾರ್ಥಿಗಳು ಇದ್ದರು.