ಕಂಪಳ ಬಳಗದ ಸ್ನೇಹಿತರು ಬೆಂಕಿಯಲ್ಲಿ ಅರಳಿದ ಹೂವುಗಳು

News Desk

ಕಂಪಳ ಬಳಗದ ಸ್ನೇಹಿತರು ಬೆಂಕಿಯಲ್ಲಿ ಅರಳಿದ ಹೂವುಗಳು
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ಕಂಪಳ ಗೆಳೆಯರ ಬಳಗ ಚಿತ್ರದುರ್ಗ ವತಿಯಿಂದ ಏರ್ಪಡಿಸಿದ ಸನ್ಮಾನ ಹಾಗೂ ಗೆಳೆಯರ ೪ನೇ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಸ್ಎಫ್ ಸಿ ನಿವೃತ್ತ ವ್ಯವಸ್ಥಾಪಕ ಚಿದಾನಂದಪ್ಪ ನೆರವೇರಿಸಿದರು.

ನಂತರ ಮಾತನಾಡಿದ ಚಿದಾನಂದಪ್ಪ, ಕಂಪಳ ಗೆಳೆಯರ ಬಳಗ ಹಿಂದಿನ ೪೦ ವರ್ಷಗಳ ಸ್ನೇಹರ ಬಳಗವಾಗಿದೆ. ಇಂದಿಗೂ ನಮ್ಮಗಳ ಸ್ನೇಹಿತತ್ವ ಹೀಗೆ ಮುಂದುವರಿದು ಕೊಂಡು ಹೋಗಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
40 ವರ್ಷಗಳ ಜೀವನದಲ್ಲಿ ಕಂಡುಂಡ ಸ್ನೇಹ ಮಿಲನ ಬಹುದೊಡ್ಡ ಹಿತಾನುಭವ ನೀಡಿದೆ ಎಂದು ಅವರು ಹೇಳಿದರು.
ಚಿತ್ರದುರ್ಗ ನಗರ ಠಾಣೆಯ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಮಾತನಾಡಿ, ಕರುವಿನಕಟ್ಟೆ ಸರ್ಕಲ್ ವಿದ್ಯಾಭ್ಯಾಸದ ಶಕ್ತಿ ಕೇಂದ್ರವಾಗಿತ್ತು. ನಾನು ಸಹ ಈ ಶಕ್ತಿ ಕೇಂದ್ರಕ್ಕೆ ಆಗಾಗ್ಗೆ ಭೇಟಿ ನೀಡಿ ಗುರುಗಳ ಮಾರ್ಗದರ್ಶನ ಪಡೆಯುವುದರ ಮೂಲಕ ನನ್ನ ಜ್ಞಾನಾರ್ಜನೆ ಹೆಚ್ಚಿಸಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕೆ ಸಹಾಯವಾಯಿತು ಎಂದು ಅವರು ತಿಳಿಸಿದರು.

ನಾನು ಬಡತನದಲ್ಲಿ ವಿದ್ಯಾಭ್ಯಾಸ ಮುಗಿಸಿ ಕೇವಲ ೫೦೦ ರೂಗಳ ಸಂಬಳಕ್ಕೆ ಮಂಡಕ್ಕಿ ತಿಂದು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೆ. ಕಾರಣ ನನಗೆ ಶಿಕ್ಷಕ ವೃತ್ತಿಯಲ್ಲಿ ತುಂಬಾ ಸಂತೋಷವಿತ್ತು ಏಕೆಂದರೆ ನಮ್ಮ ತಂದೆಯವರು ಸಹ ಶಿಕ್ಷಕರಾಗಿದ್ದರು. ಆದರೆ ಅನಿವಾರ್ಯವಾಗಿ ನನಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು ಎಂದರು.

ನಾವುಗಳು ಹೋರಾಟದಿಂದ ಬಂದು ಜೀವನ ರೂಪಿಸಿಕೊಂಡಿದ್ದೇವೆ ನಮಗೆ ಬಡತನ ಹಸಿವು ಏನು ಎಂಬುದು ಗೊತ್ತಿದೆ ಎಂದು ತಿಳಿಸಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿ ಇಲಾಖೆಗೆ ಕೀರ್ತಿತರುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭೆಗಳನ್ನು ಹೊರ ತರಲು ಕಂಪಳ ಗೆಳೆಯರ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ತಿಪ್ಪೇಸ್ವಾಮಿ ಸಲಹೆ ನೀಡಿದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಎಂ ರೇವಣಸಿದ್ದಪ್ಪ ಮಾತನಾಡಿ ವಿವಿಧ ಜಾತಿ, ಧರ್ಮ, ಪ್ರದೇಶ ಗಳನ್ನು ಒಳಗೊಂಡ ಗುಂಪು ಕಂಪಳ ಬಳಗವಾಗಿದೆ. ಈ ಬಳಗದಲ್ಲಿರುವ ಎಲ್ಲಾ ಸ್ನೇಹಿತರು ಬೆಂಕಿಯಲ್ಲಿ ಅರಳಿದ ಹೂವುಗಳು ಇದ್ದಂತೆ. ನಾವುಗಳು ಇನ್ನೂಷ್ಟು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹೆಚ್ಚು ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಂ.ಎನ್.ರಮೇಶ್ ಮಾತನಾಡಿ ನಮ್ಮ ಬದುಕುಗಳನ್ನು ಹಸನ ಮಾಡಿಕೊಳ್ಳುವುದಕ್ಕೆ ಈ ಕಂಪಳ ಗೆಳೆಯರ ಬಳಗ ತುಂಬಾ ಸಹಾಯವಾಗಿದೆ ಎಂದರು.
ಇಂದಿಗೂ ನಮ್ಮ ಸ್ನೇಹಿತತ್ವ ತುಂಬ ಗಟ್ಟಿಯಾಗಿ ನಿಂತಿರುವುದು ಕಂಪಳ ಬಳಗವೇ ಕಾರಣ ಎಂದು ರಮೇಶ್ ತಿಳಿಸಿದರು.

ಮೇಜರ್ ಡಾ.ಅಂಜನಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಆಕಸ್ಮಿಕವಾಗಿ ಈ ಬಳಗದ ಸದಸ್ಯನಾದೆ. ನಾನು ಅನಕ್ಷರತೆ ಜಾತೀಯತೆ ಧರ್ಮ ಅಸ್ಪೃಶ್ಯತೆ ಮತ್ತು ಬಡತನ ಇಂತಹ ಸಮಸ್ಯೆಗಳ ಬಗ್ಗೆ ನನ್ನ ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಸಣ್ಣ ನೌಕರಿಯಲ್ಲಿ ಕೆಲಸ ಮಾಡಿಕೊಂಡು ಸ್ನಾತಕೋತರ ಪದವಿ ವ್ಯಾಸಂಗ ಮಾಡಿ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಅವಕಾಶವನ್ನು ದೊರಕಿಸಿಕೊಂಡು ನಾನು ಬಯಲು ಸೀಮೆಯಿಂದ ಹೋಗಿ 32 ವರ್ಷಗಳ ಕಾಲ ಮಲೆನಾಡಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ ಎಂದು ತಿಳಿಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ಪ್ರತಿಭೆಗಳು ಗುಡಿಸಿಲಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತವೆ ಎಂಬ ಗಾದೆ ನಮ್ಮ ಕಂಪಳ ಗೆಳೆಯರಿಗೆ ಅನ್ವಯಿಸುತ್ತದೆ. ನಾವುಗಳೆಲ್ಲರೂ ಸಣ್ಣ ಕುಗ್ರಾಮದಲ್ಲಿ ಜನಸಿ ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಸರ್ಕಾರಿ ನೌಕರಿ ಪಡೆದು ಈ ದಿನ ಉನ್ನತ ಮಟ್ಟ ತಲುಪಿದ್ದೇವೆ ಎಂದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಯ್ಯ ಮಾತನಾಡಿದರು.
ನಿವೃತ್ತಿ ಮೇಜರ್ ಡಾ. ಅಂಜನಪ್ಪ, ನಿವೃತ್ತ ಪ್ರಾಚಾರ್ಯರು ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ, ಆರ್ ಜಿ ವೀರಪ್ಪ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಕಂಪಳ ರಂಗ ಗ್ರಾಮಾಂತರ ಪ್ರೌಢಶಾಲೆ ತುಮಕೂರ್ಲಾಳ್ಳಿ ಮೊಳಕಾಲ್ಮೂರು ತಾಲೂಕು ಓ ಮಲ್ಲಿಕಾರ್ಜುನಯ್ಯ ನಿವೃತ್ತ ಸಹ ಶಿಕ್ಷಕರು ನಿಡಗಲ್ಲು ಪಾವಗಡ ತಾಲೂಕು ಹಾಗೂ ಪದೋನ್ನೋತ್ತಿ ಹೊಂದಿದ ನಾಗರಾಜ್. ಕೇಂದ್ರ ಗೃಹ ಸಚಿವಾಲಯ ಭಾರತ ಸರ್ಕಾರ ಬಳ್ಳಾರಿ ಇವರುಗಳನ್ನು ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಭೂ ದಾಖಲೆಗಳ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ವಿ.ಅಜ್ಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಂಪಳ ಗೆಳೆಯರ ಬಳಗದ ವತಿಯಿಂದ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಪ್ರಾಚಾರ್ಯ ಎಂ.ಮಂಜಣ್ಣ, ಪ್ರಾಚಾರ್ಯ ವೇದಮೂರ್ತಿ, ಬೆಂಗಳೂರು ಕೇಂದ್ರ ಗೃಹ ರಕ್ಷಕ ದಳ ಆಡಳಿತಾಧಿಕಾರಿ ಆರ್.ಪಿ.ಜಯಣ್ಣ, ಉಪನ್ಯಾಸಕ ಜೈ ಶ್ರೀನಿವಾಸ್, ನಿವೃತ್ತ ಉಪನ್ಯಾಸಕ ಎಸ್.ರಾಮಣ್ಣ ಮೈಸೂರು, ಹಿಂದಿ ಶಿಕ್ಷಕ ನಾಗರಾಜ್ (ಸದಾಂ) ಹೊಳಲ್ಕೆರೆ ವಾಚ್ ಸೆಂಟರ್ ನಾಗಭೂಷಣ್, ನಿವೃತ್ತ ಎ.ಎಸ್.ಐ ಅಲ್ಕೂರಯ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ, ನಿವೃತ್ತ ಅಧೀಕ್ಷಕ ನಿರಂಜನ, ನಿವೃತ್ತ ಪ್ರಾಧ್ಯಾಪಕ ಭೀರಲಿಂಗಪ್ಪ, ರಂಗಪ್ಪ, ಸಹ ಪ್ರಾಧ್ಯಾಪಕ ಶಿವಾಜಿ, ನಿವೃತ್ತ ಪ್ರಾಚಾರ್ಯ ರಾಮರೆಡ್ಡಿ, ಮ್ಯಾಕಲ ಬೋರಯ್ಯ, ನಿವೃತ್ತ ಶಿಕ್ಷಕ ಹನುಮಂತಪ್ಪ, ದೀಪಕ್ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";