ಜಿಲ್ಲಾಧಿಕಾರಿ ಕಚೇರಿಯ ಪೀಠೋಪಕರಣಗಳ ಜಫ್ತಿಗೆ ಆದೇಶ
ಚಂದ್ರವಳ್ಳಿ ನ್ಯೂಸ್, ಸೊರಬ :
ರಸ್ತೆ ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಭೂಮಿ ಕಳೆದುಕೊಂಡು ಪರಿಹಾರ ನೀಡುವಲ್ಲಿ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯದ ಅಮೇಲ್ಜಾರಿ ಸಂಖ್ಯೆ ೧೬/೨೦೨೪ರಲ್ಲಿ ಆದೇಶ ಹೊರಡಿಸಿದ ಅಪರೂಪದ ಘಟನೆ ಜರುಗಿದೆ.
ಘಟನೆಯ ಹಿನ್ನೆಲೆ :
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಅಗಡಿ ಅಶೋಕ್ ಎನ್ನುವವರಿಗೆ ಸೇರಿದ ನಿವೇಶನದ ಸ್ಪಲ್ಪ ಭಾಗವನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಕೆ-ಶಿಪ್) ೨೦೧೧ರಲ್ಲಿ ವಶಪಡಿಸಿಕೊಂಡಿತ್ತು. ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಪರಿಹಾರ ನೀಡಿಲ್ಲ ಎಂದು ನಿವೇಶನದ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್ ನಿರ್ದೇಶನದಂತೆ ಪಿರ್ಯಾದಿದಾರರಾದ ಅಗಡಿ ಅಶೋಕ್ ಅವರಿಗೆ ಮೂರು ತಿಂಗಳೊಳಗೆ ೩.೯೩ ಕೋಟಿ ರೂ., ಸೇರಿದಂತೆ ಒಟ್ಟು ೪.೪೪ ಕೋಟಿ ರೂ., ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಸೂಚನೆ ನೀಡಲಾಗಿತ್ತು.
ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆ ಜಿಲ್ಲಾ ನ್ಯಾಯಾಲಯವು ಜಿಲ್ಲಾಧಿಕಾರಿ ಕಚೇರಿಯ ಚರಾಸ್ತಿಯಾದ ಪೀಠೋಪಕರಣಗಳನ್ನು ಜಪ್ತಿ ಮಾಡಬೇಕು. ಹಾಗೂ ಮುಂದಿನ ಆದೇಶದವರೆಗೆ ವಶಕ್ಕೆ ಪಡೆಯುವಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಪಿರ್ಯಾದಿದಾರ ಪರವಾಗಿ ಸೊರಬದ ವಕೀಲ ಪಿ.ವಿ. ಖರೆ ಹಾಗೂ ದಿನಕರ್ ಭಟ್ ಭಾವೆ ವಾದ ಮಂಡಿಸಿದ್ದರು.