ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಎಐಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ವ್ಯಾಪ್ತಿ ಮುಷ್ಕರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ರೂಸರ್ ವಾಹನ ಟೈಯರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿ ೧೩ಕ್ಕೂ ಹೆಚ್ಚು ಜನರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮೊಳಕಾಲ್ಮೂರು ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಅಂಗನವಾಡಿ ಹಾಗೂ ಸಹಾಯಕಿಯರು ಬೆಂಗಳೂರಿನ ಪ್ರೀಡಂಪಾರ್ಕ್ನಲ್ಲಿ ಸೆ.೧೯ ಗುರುವಾರ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಪಾಲ್ಗೊಳ್ಳಲು ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ಬೆಳಗಿನಜಾವ ಸುಮಾರು ೫ರ ಸಮೀಪ ಸದರಿ ವಾಹನ ಬುಡ್ನಹಟ್ಟಿ ಬಳಿಯ ಶಿವಗಂಗ ಪೆಟ್ರೋಲ್ ಬಂಕ್ ಸಮೀಪ ಹಿಂಭಾಗದ ಟೈಯರ್ ಸಿಡಿದ ಕಾರಣ ವಾಹನ ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಎಲ್ಲರೂ ಗಾಯಗೊಂಡಿದ್ಧಾರೆ.
ಗಾಯಾಳು ರುಕ್ಸಾನಪರ್ವಿನ್ ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಕ್ರೂಸರ್ ವಾಹನ ಚಾಲಕ ಮಿತಿಮೀರಿದ ವೇಗ, ಅಜಾಗರಾಗರೂಕತೆಯಿಂದ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಜ್ಯೋತಿಲಕ್ಷ್ಮಿ, ಲಲಿತಮ್ಮ, ಷಂಷದ್, ಕಾವೇರಿ, ಕನಕ, ಮಮತ, ಅನಿತಾ, ಜಯಲಕ್ಷ್ಮಿ, ರಾಧಮ್ಮ, ಅಂಭಿಕ, ಚನ್ನಮ್ಮ ಹಾಗೂ ಚಾಲಕ ಮಂಜುನಾಥ ಗಾಯಗೊಂಡಿದ್ದಾರೆ. ಚಳ್ಳಕೆರೆ ಠಾಣಾಧಿಕಾರಿ ಎಚ್.ಮಂಜಪ್ಪ ಪ್ರಕರಣ ದಾಖಲಿಸಿದ್ದಾರೆ. ಎಐಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವೈ.,ಶಿವರುದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.