ಅಮೆರಿಕ-ಕರ್ನಾಟಕ ನಡುವೆ ಸಿಸ್ಟರ್ ಸಿಟಿ ರೂಪಿಸುವ ಪ್ರಸ್ತಾಪ:

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ/ಬೆಂಗಳೂರು:
ಕರ್ನಾಟಕ ಮತ್ತು ಅಮೆರಿಕ ನಡುವೆ ವಾಣಿಜ್ಯೋದ್ಯಮ ಸಂಬಂಧಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟಿ ಅವರೊಂದಿಗೆ ಚರ್ಚೆ ನಡೆಸಲಾಯಿತು ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನವದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಕೆಲವು ಸಿಸ್ಟರ್ ಸಿಟಿ ಕಾರಿಡಾರ್ ರೂಪಿಸುವ ಬಗ್ಗೆ ಪ್ರಸ್ತಾವನೆಯನ್ನು ಅವರ ಮುಂದೆ ಇರಿಸಿದ್ದೇನೆ. ಬಹಳ ಪ್ರಮುಖವಾಗಿ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ರ್ಸಿಸ್ಕೊ ನಡುವೆ ನವೋದ್ಯಮಗಳು ಹಾಗೂ ಆವಿಷ್ಕಾರಗಳಲ್ಲಿ ಸಮಾನ ಸಂಗತಿ ಇದೆ. ಅಲ್ಲಿನ ಪರಿಸರ, ವಾತಾವರಣ, ಎಕೋಸಿಸ್ಟಂಗಳಲ್ಲಿನ ಆವಿಷ್ಕಾರಗಳನ್ನು ಕರ್ನಾಟಕದಲ್ಲಿ ಅಳವಡಿಸುವುದು, ಇಲ್ಲಿನ ಕಲಿಕೆಗಳನ್ನು ಅಲ್ಲಿ ಬಳಸುವುದು, ವಿಶೇಷವಾಗಿ ಕರ್ನಾಟಕದಲ್ಲಿ ಬೆಳೆಯುತ್ತಿರುವ ನವೋದ್ಯಮಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ ಕಲ್ಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವ ಬಗ್ಗೆ ಸಹ ಚರ್ಚೆ ನಡೆಯಿತು ಎಂದು ಸಚಿವರು ಹೇಳಿದರು.
ವಾಷಿಂಗ್ಟನ್ ಜೊತೆ ಫಿಂಟೆಕ್ಸ್ ಹಾಗೂ ಎಐ, ಆಸ್ಟಿನ್ ಜೊತೆ ಸೆಮಿಕಂಡಕ್ಟರ್ ಉತ್ಪಾದನೆ ಸೇರಿದಂತೆ ಮಾರುಕಟ್ಟೆ ಜೊತೆಗೆ ಸ್ಕಿಲ್ ಕಾರಿಡಾರ್ ಮಾಡುವ ಬಗ್ಗೆ ಮಾತುಕತೆ ನಡೆಯಿತು ಎಂದು ಪ್ರಿಯಾಂಕ್ ಖರ್ಗೆ ವರದಿಗಾರರಿಗೆ ವಿವರಿಸಿದರು.

ಬೆಂಗಳೂರಿನಲ್ಲಿ ಯು.ಎಸ್ ರಾಯಭಾರಿ ಕಚೇರಿಯನ್ನು ಆದ್ಯತೆ ಮೇರೆಗೆ ಆರಂಭಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನವದೆಹಲಿಯಲ್ಲಿರುವ ಭಾರತದಲ್ಲಿನ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಯಭಾರಿ ಎರಿಕ್ ಗಾರ್ಸೆಟಿ ಅವರು ಸಂದರ್ಭದಲ್ಲಿ ಭರವಸೆ ನೀಡಿದರು ಎಂದೂ ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ಮಾಡುವುದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ, ಕನ್ನಡಿಗ ವಿದ್ಯಾರ್ಥಿಗಳಿಗೆ ಹಾಗೂ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ವೀಸಾ ಲಭ್ಯತೆ ಹೆಚ್ಚುತ್ತದೆ ಎಂಬ ರಾಜ್ಯದ ಅಭಿಪ್ರಾಯವನ್ನು ರಾಯಭಾರಿಗಳು ಸಮ್ಮತಿಸಿದರು ಎಂದು ಹೇಳಿದರು.

ಅಮೆರಿಕ ರಾಯಭಾರ ಕಚೇರಿ ತೆರೆಯಲು ಕರ್ನಾಟಕ ಹಾಗೂ ಬೆಂಗಳೂರು ನಮಗೆ ನೈಸರ್ಗಿಕ ಆಯ್ಕೆ ಎಂದೂ ಅಮೆರಿಕ ರಾಯಭಾರಿಗಳು ಹೇಳಿದರು. ಕರ್ನಾಟಕ ಈಗ ವಿಶ್ವದ ನಾಲ್ಕನೆ ಅತಿ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿರುವುದರಿಂದ ಹಾಗೂ ಅಮೆರಿಕ ಹಾಗೂ ಕರ್ನಾಟಕದ ನಡುವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮ್ಯತೆ ಇರುವುದರಿಂದ ಬೆಂಗಳೂರು ನಮಗೆ ಸ್ವಾಭಾವಿಕ ಆಯ್ಕೆ ಎಂಬ ಅಭಿಪ್ರಾಯವೂ ಅವರದಾಗಿತ್ತು. ಎಐ ಕ್ಷೇತ್ರದಲ್ಲಿ ಬೆಂಗಳೂರು ಈಗ ಜಗತ್ತಿನ ಐದನೆ ಒಂದು ನಗರವಾಗಿದೆ, ಕೌಶಲ್ಯ ಅಭಿವೃದ್ಧಿ ಹಾಗೂ ಎಐ ಕೌಶಲ್ಯದಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದರಿಂದ ಬಂಡವಾಳ ಹಾಗೂ ವ್ಯಾಪಾರೋದ್ಯಮಕ್ಕೆ ಭಾರತದಲ್ಲಿ ಕರ್ನಾಟಕ ಸೂಕ್ತವಾಗಿದೆ ಎಂದು ರಾಯಭಾರಿ ಎರಿಕ್ ಗಾರ್ಸೆಟಿ ಅಭಿಪ್ರಾಯ ಹೊಂದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಮ್ಮ ಮಾನವ ಸಂಪನ್ಮೂಲ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದೂ ರಾಯಭಾರಿಗಳು ಮೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ರಾಯಭಾರಿ ಕಚೇರಿ ತೆರೆಯುವುದರಿಂದ ಅಮೆರಿಕ ಹಾಗೂ ಭಾರತಕ್ಕೆ ನೆರವಾಗುವುದು ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ತೆರೆಯಲು ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನೀಡಿದ್ದ ಸಂದೇಶವನ್ನು ನಾನು ಅಮೆರಿಕ ರಾಯಭಾರಿಗಳಿಗೆ ತಲುಪಿಸಿದ್ದೇನೆ ಎಂದು ಸಚಿವರು ಹೇಳಿದರು.

 

- Advertisement -  - Advertisement -  - Advertisement - 
Share This Article
error: Content is protected !!
";