ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟಿ.ಎಸ್.ರಾಮಚಂದ್ರರಾವ್ (ಟಿಎಸ್ಆರ್)ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಅಭಿನಂದಿಸಿದೆ.
ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರುಗಳಾದ ಶಿವಾಜಿ ಎಸ್. ಗಣೇಶನ್, ಶ್ರೀಕಾಂತಾಚಾರ್ಯ.ಆರ್.ಮಣೂರ, ಡಾ.ಆರ್.ಪೂರ್ಣಿಮಾ, ಪದ್ಮರಾಜ ದಂಡಾವತಿ ಹಾಗೂ ಡಾ.ಸರಜೂ ಕಾಟ್ಕರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ರಾಜೀವ್ ಕಿದಿಯೂರ, ಇಂದೂಧರ ಹೊನ್ನಾಪುರ, ಎನ್.ಮಂಜುನಾಥ, ಚಂದ್ರಶೇಖರ್ ಪಾಲೆತ್ತಾಡಿ ಹಾಗೂ ಶಿವಲಿಂಗಪ್ಪ ದೊಡ್ಡಮನಿ ಅವರುಗಳಿಗೆ ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸಲ್ಲಿಸಿದ್ದಾರೆ.
ಪತ್ರಕರ್ತರುಗಳ ಸುಧೀರ್ಘ ಅವಧಿಯ ವೃತ್ತಿ ಸೇವೆಯನ್ನು ಪರಿಗಣಿಸಿ ಹಿರಿಯ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಿರುವ ಸಮಿತಿಗೂ ಧನ್ಯವಾದ ತಿಳಿಸಿದ್ದಾರೆ.
ಪ್ರಶಸ್ತಿ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸಲು ಒತ್ತಾಯ:
ರಾಜ್ಯೋತ್ಸವದಿಂದ ಹಿಡಿದು ಹಲವು ಇಲಾಖೆಗಳಲ್ಲಿ ನೀಡುವ ಪ್ರಶಸ್ತಿ ಮೊತ್ತವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಆದರೆ, ಟಿಎಸ್ಆರ್ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿಗೆ ತಲಾ 2 ಲಕ್ಷ ನಗದು ನೀಡಲಾಗುತ್ತಿದೆ.
ಈ ಪ್ರಶಸ್ತಿ ಮೊತ್ತವನ್ನು ಈ ಸಾಲಿನಿಂದಲೇ ಜಾರಿಗೆ ಬರುವಂತೆ ಕನಿಷ್ಠ 5 ಲಕ್ಷ ರೂಗೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.