ಕೂಡಲ ಸಂಗಮೇಶ್ವರ ದೇವಸ್ಥಾನ ಪ್ರವಾಸೋದ್ಯಮ ವ್ಯಾಪ್ತಿಗೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:

ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಗೊಂಡನಹಳ್ಳಿ ವೇದಾವತಿ ನದಿಯ ಮಧ್ಯಭಾಗದಲ್ಲಿರುವ ಪ್ರಾಚೀನಕಾಲದ ದೇವಸ್ಥಾನಗಳಲ್ಲಿ ಒಂದಾದ ಶ್ರೀಕೂಡಲಸಂಗಮೇಶ್ವರಸ್ವಾಮಿ ಸನ್ನಿಧಿಯನ್ನು ಪ್ರವಾಸಿತಾಣವನ್ನಾಗಿ ಮಾಡಬೇಕೆನ್ನುವ ಈ ಭಾಗದ ಭಕ್ತರ ಅಪೇಕ್ಷೆ ಹಾಗೂ ಶಾಸಕರ ಅಭಿಲಾಷೆಯಂತೆ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಭರವಸೆಯನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀಡಿದರು.

ಅವರು, ಶನಿವಾರ ನಾಗಗೊಂಡನಹಳ್ಳಿಯ ಬ್ಯಾರೇಜ್ ಪ್ರದೇಶಕ್ಕೆ ಭೇಟಿ ನೀಡಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸೇರಿ ಬಾಗಿನ ಅರ್ಪಿಸಿದ ನಂತರ ದೇವಸ್ಥಾನದ ಆಡಳಿತ ಮಂಡಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ನಾಗಗೊಂಡನಹಳ್ಳಿಗೆ ಹೊಂದಿಕೊಂಡಂತೆ ಶ್ರೀಚಲುಮೆರುದ್ರಸ್ವಾಮಿ ಮಠವಿದ್ದು, ಅದಕ್ಕೆ ಕೆಲವೇ ದೂರದಲ್ಲಿ ಶ್ರೀಕೂಡಲಸಂಗಮೇಶ್ವರಸ್ವಾಮಿ ಸನ್ನಿಧಿ ಇದೆ. ಇದನ್ನು ಪ್ರವಾಸಿಕೇಂದ್ರವನ್ನಾಗಿ ಗುರುತಿಸಿದರೆ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಕಾಣಬಹುದು. ಆಗಮಿಸುವ ಭಕ್ತರಿಗೂ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ಪುರಾತನ ಕಾಲದ ಈ ದೇವಸ್ಥಾನ ವೇದಾವತಿ ನದಿಯ ತಡದಲ್ಲಿದ್ದು, ಪ್ರತಿವರ್ಷ ರಾಜ್ಯದ ನಾನಾಕಡೆಯಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಕಾಂಪೌಂಡ್, ಸಮುದಾಯ ಭವನ ನಿರ್ಮಾಣವೂ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಜಿಲ್ಲಾಧಿಕಾರಿಗಳು ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ನೀಡಿ, ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಭರವಸೆ ನೀಡಿದ್ಧಾರೆ. ಶ್ರೀಕೂಡಲಸಂಗಮೇಶ್ವರ ದೇವಸ್ಥಾನವನ್ನು ಅಭಿವೃದ್ದಿ ಪಡಿಸುವ ಪುಣ್ಯಕಾರ್ಯ ನನ್ನಪಾಲಿಗೆ ಬಂದಿರುವುದು ಹೆಮ್ಮೆ ತಂದಿದೆ. ಶಾಸಕರ ಅನುದಾನದಲ್ಲಿ ೧೦ ಲಕ್ಷ ಹಣವನ್ನು ಬಿಡುಗಡೆಗೊಳಿಸಿ ಸಮುದಾಯ ಭವನ ನಿರ್ಮಾಣವೂ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಹ ನಮ್ಮ ಮನವಿಯನ್ನು ಈಗಾಗಲೇ ಪುರಸ್ಕರಿಸಿ ಅವರು ಸರ್ಕಾರಕ್ಕೆ ವರದಿ ಸಿದ್ದಪಡಿಸಿ ಕಳಿಸುವರು.

ಈಗಾಗಲೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲೂ ಸಹ ಇದು ಮುಂದುವರೆಯಲಿದೆ. ವಿಶೇಷವಾಗಿ ಕೂಡಲಸಂಗಮೇಶ್ವರ ದೇವಸ್ಥಾನದ ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಸಹಕಾರ ನೀಡಲು ನಾನು ಸಿದ್ದನಿದ್ದೇನೆ. ಕೂಡಲಸಂಗಮೇಶ್ವರ ದೇವಸ್ಥಾನ ಎಲ್ಲಾ ಭಕ್ತರ ಅಭಿಲಾಷೆ, ಅನಿಸಿಕೆಯಂತೆ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಕುಮಾರ್, ತಹಶೀಲ್ದಾರ್ ರೇಹಾನ್‌ಪಾಷ, ಇಒ ಎಸ್.ಶಶಿಧರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಮ್ಮ, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ರಂಗನಾಥ, ಹೇಮಂತರಾಜ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ರೈತ ಮುಖಂಡ ನಾಗರಾಜು, ಮಂಜುನಾಥ, ಚಲ್ಮೇಶ್, ಓಬಳೇಶ್, ರಂಗಪ್ಪ, ತಿಪ್ಪೇಸ್ವಾಮಿ, ಪಿಡಿಒ ಓಬಣ್ಣ, ಕಂದಾಯಾಧಿಕಾರಿ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";