ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ದದ ಎಲ್ಲಾ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತಂಡ (ಎಸ್‌ಐಟಿ) ರಚಿಸಿ ಆದೇಶಿಸಿದೆ.
ಕೃಷ್ಣಬೈರೇಗೌಡ, ಡಾ.ಎಂ.ಸಿ ಸುಧಾಕರ್, ಶರತ್ ಬಚ್ಚೇಗೌಡ, ರಂಗನಾಥ್ ಸೇರಿದಂತೆ ಒಕ್ಕಲಿಗ ಸಮುದಾಯದ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ನಿಯೋಗ ನಿನ್ನೆ (ಸೆ.20) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಸ್‌ಐಟಿ ರಚನೆಗೆ ಮನವಿ ಸಲ್ಲಿಸಿತ್ತು.
ಶಾಸಕ ಮುನಿರತ್ನ ವಿರುದ್ದ ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದು ಮತ್ತು ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ರಾಮನಗರದ ಕಗ್ಗಲೀಪುರ ಠಾಣೆಯಲ್ಲಿ ಮಹಿಳೆಯೊಬ್ಬರ ದೂರು ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ವೈಯ್ಯಾಲಿಕಾವಲ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದ ಕಗ್ಗಲೀಪುರ ಪೊಲೀಸರು ಇಂದು (ಸೆ.21) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಗಂಭೀರತೆ ಅರಿತ ಸರ್ಕಾರ ಸಿಐಡಿಯ ಅಪರ ಪೊಲೀಸ್ ಮಹಾನಿರ್ದೇಶಕ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಈ ತಂಡದಲ್ಲಿ ಬೆಂಗಳೂರು ಕೇಂದ್ರ ವಲಯ ಪೊಲೀಸ್ ಮಹಾನಿರ್ದೆಶಕ ಲಭುರಾವ್, ಬೆಂಗಳೂರು ರೈಲ್ವೇ ಪೊಲೀಸ್ ಅಧೀಕ್ಷಕಿ ಸೌಮ್ಯಲತಾ, ಪೊಲೀಸ್ ಅಧೀಕ್ಷಕ ಸಿಎ ಸೈಮನ್ ಅವರು ಇದ್ದಾರೆ ಎಂದು ತಿಳಿದು ಬಂದಿದೆ.