ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕಿನ 5 ವರ್ಷಗಳ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಡಿ.ಸುಧಾಕರ್, ಉಪಾಧ್ಯಕ್ಷರಾಗಿ ಹೊಸದುರ್ಗದ ಹೆಚ್.ಬಿ.ಮಂಜುನಾಥ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ವಿವಿಧ ಕ್ಷೇತ್ರಗಳಿಂದ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು.ಕಳೆದ ಸೆಪ್ಟೆಂಬರ್-6 ರಂದು ಆರು ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು ಉಳಿದ 8 ಕ್ಷೇತ್ರಗಳಿಗೆ ಸೆಪ್ಟೆಂಬರ್ 12 ರಂದು ಚುನಾವಣೆ ನಡೆದಿತ್ತು. ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕಿಗೆ ಆಯ್ಕೆಯಾಗಿದ್ದ ಎಲ್ಲ 12 ಜನ ಮಂದಿ ನಿರ್ದೇಶಕರು ಸಚಿವ ಡಿ.ಸುಧಾಕರ್ ಅವರ ಆಪ್ತರು ಮತ್ತು ಬೆಂಬಲಿಗರಾಗಿದ್ದಾರೆ ಎನ್ನುವುದು ಮುಖ್ಯ.
ಈ ದಿನಾಂಕದಿಂದ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿರಲಿದೆ. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಕಾರ್ತೀಕ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಷರೀಫ್ ಮತ್ತಿತರರು ಇದ್ದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ-
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹೆಚ್.ಬಿ.ಮಂಜುನಾಥ್ ಅವರು ಅವಿರೋಧ ಆಯ್ಕೆಯಾಗುತ್ತಿದ್ದಂತೆ ಸುಧಾಕರ್ ಅವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಾಚರಣೆ ಮಾಡಿದರು.
ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿರುವ ನಿರ್ದೇಶಕರುಗಳ ಮಾಹಿತಿ-ಎ ಕ್ಷೇತ್ರದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಳ್ಳಕೆರೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಾಲಿ ಅಧ್ಯಕ್ಷ ಡಿ.ಸುಧಾಕರ್, ಹೊಳಲ್ಕೆರೆಯಿಂದ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಸಿ.ಎನ್.ಮಾಳಿಗೆ ಓ.ಮಂಜುನಾಥ್, ಹೊಸದುರ್ಗದ ಬಿ ಕ್ಷೇತ್ರದಿಂದ ಹೆಚ್.ಬಿ.ಮಂಜುನಾಥ್, ಚಳ್ಳಕೆರೆಯ ಇ ಕ್ಷೇತ್ರದಿಂದ ಕೆ.ಜಗಣ್ಣ ಹಾಗೂ ಜಿಲ್ಲೆಯ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಸಿ ಕ್ಷೇತ್ರದಿಂದ ರಘುರಾಮರೆಡ್ಡಿ ಸೇರಿ ಒಟ್ಟು 6 ಮಂದಿ ಅವಿರೋಧ ಆಯ್ಕೆಯಾಗಿದ್ದರು.
ಸೆಪ್ಟೆಂಬರ್ 12 ರಂದು ನಡೆದ ಚುನಾವಣೆಯಲ್ಲಿ ಚಿತ್ರದುರ್ಗ, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ ಕ್ಷೇತ್ರದಿಂದ ಸಿರಿಗೆರೆಯ ಪಿ.ತಿಪ್ಪೇಸ್ವಾಮಿ, ಚಿತ್ರದುರ್ಗದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎ ಕ್ಷೇತ್ರದಿಂದ ಹೆಚ್.ಎಂ.ದ್ಯಾಮಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸದುರ್ಗ ತಾಲೂಕಿನ ಎ ಕ್ಷೇತ್ರದಿಂದ ಕೆ.ಅನಂತ, ಮೊಳಕಾಲ್ಮೂರು A ಕ್ಷೇತ್ರದಿಂದ ಹೆಚ್.ಟಿ.ನಾಗಿರೆಡ್ಡಿ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ ಕ್ಷೇತ್ರದಿಂದ ಪಿ.ವಿನೋದಸ್ವಾಮಿ, ಜಿಲ್ಲೆಯ ಇನ್ನಿತರ ಸಂಘಗಳ ಎಫ್ ಕ್ಷೇತ್ರದಿಂದ ಚಿತ್ರದುರ್ಗದ ಎಂ.ನಿಶಾನಿ ಜಯಣ್ಣ ಇವರುಗಳು ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಡಿಸಿಸಿ ಬ್ಯಾಂಕಿಗೆ ಆಯ್ಕೆಯಾದ ಎಲ್ಲ 12 ಮಂದಿ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ರವರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು