ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದಡಿ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ಅಗತ್ಯ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಸಿ ತಾಣಗಳು ನಮ್ಮ ದೇಶವನ್ನಷ್ಟೇ ಅಲ್ಲ ರಾಜ್ಯವನ್ನು ಕೂಡ ಪ್ರತಿನಿಧಿಸುತ್ತವೆ. ದೇಶ ವಿದೇಶಿಗರು ಪ್ರವಾಸಿ ತಾಣಗಳಿಗೆ ಬಂದಾಗ, ಸ್ವಚ್ಛ ವಾತಾವರಣದ ಅನುಭವ ಹೊಂದುವಂತಾಗಬೇಕು, ಅಗತ್ಯ ಮಾಹಿತಿ ದೊರಕುವಂತಿರಬೇಕು.
ಈ ನಿಟ್ಟಿನಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನದಡಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲಾಗಿರುವ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಲ್ಲಿ ವಿವಿಧ ಇಲಾಖೆಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸಮುದಾಯದ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ರೂಪಿಸಬೇಕು. ಚಿತ್ರದುರ್ಗದ ಐತಿಹಾಸಿಕ ಕೋಟೆ, ಚಂದ್ರವಳ್ಳಿ ಸೇರಿದಂತೆ ವಿವಿಧ ಪ್ರಮುಖ ಪ್ರವಾಸಿ ತಾಣಗಳು ಈ ಪಾಕ್ಷಿಕ ಅಭಿಯಾನದಡಿ ಸ್ವಚ್ಛವಾಗಬೇಕು ಎಂದು ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ವಾಸಸ್ಥಳಗಳಲ್ಲಿರುವ ಖಾಲಿ ನಿವೇಶನಗಳು ಕಸ ಸಂಗ್ರಹಿಸುವ ತಾಣಗಳಾತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ.
ಖಾಲಿ ನಿವೇಶನದಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಇದರಿಂದಲೂ ನಗರದ ಸ್ವಚ್ಛತೆಗೆ ತೀವ್ರ ಸಮಸ್ಯೆಯಾಗುತ್ತದೆ, ಅಲ್ಲದೆ ಇಂತಹ ತಾಣಗಳಲ್ಲಿ ಹಾವು ಸೇರಿದಂತೆ ಇತರೆ ವಿಷಕಾರಿ ಜಂತುಗಳು ಸೇರಿಕೊಂಡು, ಜನರಿಗೆ ತೊಂದರೆ ಕೊಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ವಾಸಸ್ಥಳದಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿರಿಸುವುದು ಸಂಬಂಧಪಟ್ಟ ನಿವೇಶನಗಳ ಮಾಲೀಕರ ಜವಾಬ್ದಾರಿಯಾಗಿರುತ್ತದೆ.
ಒಂದು ವೇಳೆ ಮಾಲೀಕರು ಸ್ವಚ್ಛಗೊಳಿಸದಿದ್ದರೆ, ಸಂಬಂಧಿಸಿದ ಸ್ಥಳೀಯ ಸಂಸ್ಥೆಯಿಂದಲೇ ಸ್ವಚ್ಛಗೊಳಿಸಿ, ಕಾಯ್ದೆಯನುಸಾರ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ದಂಡ ಹಾಗೂ ಸ್ವಚ್ಛತಾ ವೆಚ್ಚ ವಸೂಲಿ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಅವೈಜ್ಞಾನಿವಾಗಿ ಚರಂಡಿ ನಿರ್ಮಿಸಿರುವುದರಿಂದ, ನೀರು ಸರಾಗವಾಗಿ ಹರಿದುಹೋಗದೆ, ಮಳೆಯ ನೀರು ಹಾಗೂ ಕಸ, ತ್ಯಾಜ್ಯ ಎಲ್ಲವೂ ರಸ್ತೆಯ ಮೇಲೆಯೇ ನಿಂತು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ.
ನಗರದಲ್ಲಿನ ಎಲ್ಲ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು, ಹಾಗೂ ಗ್ರಾಮಗಳಲ್ಲಿಯು ಕೂಡ ಗ್ರಾಮ ಪಂಚಾಯತಿಗಳು ಚರಂಡಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
ಅಧಿಕಾರಿಗಳು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಮಾತ್ರ ಸ್ವಚ್ಛತೆ ಇರಲು ಸಾಧ್ಯ, ನಮ್ಮೂರು, ನಮ್ಮ ಗ್ರಾಮ, ನಮ್ಮ ಬೀದಿ ಎಂಬ ಮನೋಭಾವ ಜನರಲ್ಲಿ ಬರಬೇಕು, ಇದಕ್ಕಾಗಿಯೇ ಸ್ವಚ್ಛತಾ ಹೀ ಸೇವಾ ಪಾಕ್ಷಿಕದಡಿ ಜನರಲ್ಲಿ ಜಾಗೃತಿ ಮೂಡಿಸಬೇಕು, ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು, ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿಯಮಾನುಸಾರ ವೈದ್ಯಕೀಯ ತ್ಯಾಜ್ಯವನ್ನು ಹಾಗೂ ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಮಾಡಬೇಕು, ಆಸ್ಪತ್ರೆಗಳ ಆವರಣವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು, ಅಲ್ಲದೆ ಸಾದ್ಯವಾದಷ್ಟು ಗಿಡಗಳನ್ನು ನೆಟ್ಟು ಉತ್ತಮ ಪರಿಸರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಡಿಡಿಪಿಐ ಮಂಜುನಾಥ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.