ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಶಿರಾಳಕೊಪ್ಪದ ಬಂಕಾಪುರ ಕಾಲೋನಿಯ ಮಹಿಳೆ ಒಬ್ಬಳು ಎಟಿಎಂ ಗ್ರಾಹಕರನ್ನು ವಂಚಿಸಿ ಅವರ ಖಾತೆಯಿಂದ ಹಣ ಎಗರಿಸುತ್ತಿದ್ದ ಘಟನೆಯನ್ನು ಶಿರಸಿ ಪೊಲೀಸರು ಪತ್ತೆ ಮಾಡಿ ಆಕೆಯನ್ನು ಬಂಧಿಸಿದ್ದಾರೆ.
ಆಕೆಯಿಂದ ಸುಮಾರು ಎರಡು ನೂರು ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಸಿ ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಈ ಮಹಿಳೆಯ ಹೆಸರು ಕೌಸರ್ ಬಾನು ಎಂದಾಗಿದ್ದು, ಐವರು ಮಕ್ಕಳೊಂದಿಗೆ ಶಿರಸಿಯಲ್ಲಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದಳು.
ಸದಾ ಎಟಿಎಂ ಸುತ್ತಮುತ್ತ ಸುಳಿದಾಡುತ್ತಿದ್ದ ಈಕೆ ಅಲ್ಲಿ ಹಣ ತೆಗೆಯಲು ಬರುವ ಗ್ರಾಮೀಣ ಜನರ ಮತ್ತು ವಯೋವೃದ್ಧರನ್ನು ಗುರಿ ಮಾಡಿಕೊಂಡು ಅವರನ್ನು ಮೋಸಗೊಳಿಸಿ ನಂತರ ಅವರ ಎಟಿಎಂ ಕಾರ್ಡ್ನಿಂದ ಹಣ ತೆಗೆದುಕೊಡುವ ನಾಟಕ ಮಾಡುತ್ತಿದ್ದಳು.
ನಿಮ್ಮ ಕಾರ್ಡಿನಿಂದ ಹಣ ಬರುತ್ತಿಲ್ಲ ಎಂದು ನಂಬಿಸುತ್ತಿದ್ದಳು. ಈ ವೇಳೆ ಅವರಿಗೆ ಕಾರ್ಡನ್ನು ಗೊತ್ತಾಗದಂತೆ ಬದಲಿಸುತ್ತಿದ್ದಳು. ಅವರು ಹೋದ ನಂತರ ಅವರ ಕಾರ್ಡಿನಿಂದ ಹಣ ತೆಗೆಯುತ್ತಿದ್ದಳು. ಇದೇ ರೀತಿ ಸುಮಾರು ಜನರು ಹಣ ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಬ್ಯಾಂಕುಗಳ ಎಟಿಎಂ ಸುತ್ತಮುತ್ತ ಮಾರು ವೇಷದಲ್ಲಿ ನಿಂತು ಮತ್ತು ಸಿ ಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಈಕೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ .
ಎಲ್ಲಾ ಘಟನೆಗಳಲ್ಲೂ ಈಕೆ ಒಬ್ಬಳೇ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ ಈಕೆಯನ್ನು ಇನ್ನಷ್ಟು ವಿಚಾರಣೆ ನಡೆಸಿ ಬ್ಯಾಗ್ ಪರಿಶೀಲಿಸಿದಾಗ ಸುಮಾರು 2೦೦ ಎಟಿಎಂ ಕಾರ್ಡ್ ಗಳು ಪತ್ತೆಯಾಗಿವೆ.