ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರಿಗೆ ಜಾಮೀನು; ದರ್ಶನ್​ಗಿಲ್ಲ ರಿಲೀಫ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸೆ. 27ಕ್ಕೆ ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದರೆ, ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ದೊರೆತಿದೆ.

ಹತ್ಯೆ ಪ್ರಕರಣದ 15 ಹಾಗೂ 17ನೇ ಆರೋಪಿಗಳಾಗಿರುವ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ ಸಿಸಿಹೆಚ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ 16ನೇ ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ.

ಹೈಕೋರ್ಟ್​ನಲ್ಲಿ ಕೇಶವ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ಹಾಗೂ ಒಬ್ಬರ ವೈಯಕ್ತಿಕ ಶ್ಯೂರಿಟಿ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಈ ಮೂವರು ಆರೋಪಿಗಳೆಲ್ಲರೂ ತುಮಕೂರು ಕಾರಾಗೃಹದಲ್ಲಿದ್ದಾರೆ. ಹತ್ಯೆ ನಡೆದು ಮೂರು ತಿಂಗಳ ಬಳಿಕ ಮೊದಲ ಬಾರಿಗೆ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ.

ದರ್ಶನ್ ಜಾಮೀನು ಅರ್ಜಿ ಮುಂದೂಡಿಕೆ: ಜಾಮೀನು ಕೋರಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡು ಇಂದಿಗೆ ವಿಚಾರಣೆ ಮುಂದೂಡಿತ್ತು.

ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದೆ ವಿಶೇಷ ಅಭಿಯೋಜಕ (ಎಸ್​ಪಿಪಿ) ಪ್ರಸನ್ನ ಕುಮಾರ್ ವಾದ ಮಂಡಿಸಿದರು. ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಕೂಡದು. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನ  ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ಸೆ. 27ಕ್ಕೆ ನ್ಯಾ. ಜೈಶಂಕರ್ ಮುಂದೂಡಿ ಆದೇಶಿಸಿದರು. ಇದೇ ವೇಳೆ ಪ್ರಕರಣದ ಒಂದನೇ ಆರೋಪಿ ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನ ಸೆ.25ಕ್ಕೆ ಮುಂದೂಡಿದರು.

 

 

 

- Advertisement -  - Advertisement - 
Share This Article
error: Content is protected !!
";