ಸಿಎಂ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದಾರೆ.

 ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಸೂಚಿಸಲಾಗಿತ್ತು. ಅದರಂತೆ ಈಗ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ನಿನ್ನೆಯಿಂದ ಲೋಕಾಯುಕ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮುಡಾ ಕೇಸ್ ಸಂಬಂಧ ಕೋರ್ಟ್ ಆದೇಶ ಪಾಲನೆ ಕುರಿತಂತೆ ಮಹತ್ವದ ಸಭೆ ನಡೆಸಲಾಗಿತ್ತು. ಇಂದು ಕೂಡ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸೋದು ಡೌಟ್ ಎನ್ನಲಾಗಿತ್ತು. ಇದರ ನಡುವೆ ಮುಡಾ ಹಗರಣದಲ್ಲಿ ಕೋರ್ಟ್ ಆದೇಶದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ಎ1, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಎ2, ಪತ್ನಿ ಸಹೋದರ ಮಲ್ಲಿಕಾರ್ಜನ್ ಸ್ವಾಮಿ ಎ3, ಜಮೀನು ಮಾರಿದ ದೇವರಾಜು ಎ4 ಹಾಗೂ ಇತರರ ವಿರುದ್ಧ CRPC ಸೆಕ್ಷನ್ ಅಡಿ ದೂರು ದಾಖಲಾಗಿದೆ.

ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಉದೇಶ್ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರತಿಗಳನ್ನು ಅಧಿಕೃತವಾಗಿ ಪಡೆದುಕೊಂಡು ಲೋಕಾಯುಕ್ತ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಫ್ ಐಆರ್ ದಾಖಲಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";