ಅಪಹರಣಕ್ಕೊಳಗಾಗಿದ್ದ ಬಾಲಕನೇ ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ :
ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ ಬೆಳೆದು ದೊಡ್ಡವನಾಗಿ ವಕೀಲನಾಗಿ ಇದೀಗ ತನ್ನನ್ನ ಕಿಡ್ನಾಪ್ ಮಾಡಿದ್ದ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ್ದು ಈ ವಿಶೇಷ ಪ್ರಕರಣ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಏಳು ವರ್ಷದ ಬಾಲಕ ಹರ್ಷ ಗರ್ಗ್ ನನ್ನು ಅಪಹರಿಸಿದ್ದ ಆರೋಪಿಗಳಿಗೆ ಆಗ್ರಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾವ ಬಾಲಕ ಅಂದು ಅಪಹರಣಕ್ಕೊಳಗಾಗಿದ್ದಾನೋ ಅದೇ ಬಾಲಕ ಇಂದು ವಕೀಲರಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ವಾದಮಂಡಿಸಿದ್ದಾನೆ.

ಘಟನೆ ವಿವರ-ಆಗ್ರಾದ ಖೇರ್ ಗಢ್ ನಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಕೆಲ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಪ್ರಕರಣ ನಡೆದು 17 ವರ್ಷಗಳೇ ಕಳೆದಿದೆ. ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್ ಜಿಲ್ಲಾ ನ್ಯಾಯಾಧೀಶರಾದ ನೀರಜ್ ಕುಮಾರ್ ಬಕ್ಷಿ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು.

ಅಂದು ಅಪಹರಿಸಲ್ಪಟ್ಟ ಹರ್ಷ ಗರ್ಗ್ ಎಂಬ ಬಾಲಕ ಈ 17 ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದು ಈಗ ಆತ 24ರ ಹರೆಯದ ಯುವ ವಕೀಲರಾಗಿದ್ದಾರೆ. ತನ್ನ ಅಪಹರಣಕಾರ ಆರೋಪಿಗಳ ಬಗ್ಗೆ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಶಿಕ್ಷೆ ವಿಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2007ರ ಫೆಬ್ರವರಿ 10ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಗರ್ಗ್ ನನ್ನು ತಂಡವೊಂದು ಅಪಹರಿಸಿತ್ತು. ಈ ಸಂದರ್ಭದಲ್ಲಿ ಅಪಹರಣ ತಡೆಯಲು ಯತ್ನಿಸಿದ್ದ ಗರ್ಗ್ ತಂದೆ ರವಿ ಕುಮಾರ್ ಗರ್ಗ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

ನಂತರ ಹರ್ಷ ಗರ್ಗ್ ಬಿಡುಗಡೆಗೆ 55 ಲಕ್ಷ ರೂಪಾಯಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಸುಮಾರು 26 ದಿನಗಳ ನಂತರ ಮಧ್ಯಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗರ್ಗ್ ನನ್ನು ರಕ್ಷಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಡ್ಡಾನ್ ಕಾಛಿ, ರಾಜೇಶ್ ಶರ್ಮಾ, ರಾಜ್ ಕುಮಾರ್, ಫತೇಹ್ ಸಿಂಗ್ ಅಲಿಯಾಸ್ ಛಿಗಾ, ಅಮರ್ ಸಿಂಗ್, ಬಲ್ವೀರ್, ರಾಮ್ ಪ್ರಕಾಶ್, ಭೀಮ್ ಅಲಿಯಾಸ್ ಭಿಖಾರಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದರು.

17 ವರ್ಷಗಳ ಬಳಿಕ ಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ನಾಲ್ವರು ಆರೋಪಿಗಳು ಖುಲಾಸೆಗೊಂಡಿದ್ದರು.

ಈ ಪ್ರಕರಣದಲ್ಲಿ ಗರ್ಗ್ ಸಾಕ್ಷ್ಯ ಪ್ರಮುಖ ಪಾತ್ರ ವಹಿಸಿತ್ತು. 2022ರಲ್ಲಿ ಹರ್ಷ ಗರ್ಗ್ ಕಾನೂನು ಪದವಿ ಪಡೆದಿದ್ದು, ಬಳಿಕ ಗರ್ಗ್ ಈ ಪ್ರಕರಣದ ವಾದ, ಪ್ರತಿವಾದ ಪ್ರಕ್ರಿಯೆಯಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. 2024ರ ಸೆಪ್ಟೆಂಬರ್ 17ರಂದು ಕೋರ್ಟ್ ನಲ್ಲಿ ತನ್ನ ಅಪಹರಣ ಪ್ರಕರಣದ ಬಗ್ಗೆ ಅಂತಿಮ ವಾದ ಸಮರ್ಥವಾಗಿ ಮಂಡಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";