Ad imageAd image

ತ್ರಿಭಾಷಾ ಸೂತ್ರ ಎಷ್ಟು ಸರಿ?, ಕನ್ನಡ : ರಾಜ್ಯ ಭಾಷೆ…. ಹಿಂದಿ : ರಾಷ್ಟ್ರ ಭಾಷೆ…. ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ..

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ತ್ರಿಭಾಷಾ ಸೂತ್ರ ಎಷ್ಟು ಸರಿ……..

ಕನ್ನಡ : ರಾಜ್ಯ ಭಾಷೆ….ಹಿಂದಿ : ರಾಷ್ಟ್ರ ಭಾಷೆ….ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ…..

ಈ ಭಾಷಾ ಸೂತ್ರ ಸರಿಯೇ ? ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತಕ್ಕೆ ಇದು ಒಳ್ಳೆಯದೇ ಅಥವಾ ಮಾರಕವೇ ? ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಹಿತವೇ ಅಥವಾ ಅಪಾಯಕಾರಿಯೇ ?
ಭಾಷಾ ಅಸ್ಮಿತೆ ಮತ್ತು ದೇಶದ ಅಸ್ಮಿತೆಗೆ ಇದು ಪೂರಕವೇ ವಿರುದ್ಧವೇ ? ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಮರಸ್ಯಕ್ಕೆ ಉಪಕಾರವೇ ? ವಿನಾಶವೇ ?….

ನೀವು ಅಪ್ಪಟ ಕನ್ನಡ ಅಭಿಮಾನಿಗಳೇ ಆಗಿರಲಿ, ನೀವು ಭಾವುಕ ದೇಶಭಕ್ತರೇ ಆಗಿರಲಿ, ನೀವು ಹಿಂದಿ ಭಾಷೆಯ ಪಂಡಿತರೇ ಆಗಿರಲಿ, ನೀವು ಸಹಜ ಸ್ವಾಭಾವಿಕ ಸಾಮಾನ್ಯ ಪ್ರಜೆಗಳೇ ಆಗಿರಲಿ ಮತ್ತು ಏನೇ ಆಗಿರಲಿ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕಿಕೊಂಡಾಗ ಮಾತ್ರ ಈ ವಿಷಯದ ವಾಸ್ತವದ ಹತ್ತಿರಕ್ಕೆ ಹೋಗಬಹುದು. ಅದನ್ನು ಸಮಷ್ಟಿ ಪ್ರಜ್ಞೆಯ ದೃಷ್ಟಿಕೋನ ಎಂದು ಕರೆಯಲಾಗುತ್ತದೆ.

1) ಹಿಂದಿ ಭಾಷೆಯನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ಒಂದು ಕಡ್ಡಾಯ ಭಾಷೆಯಾಗಿ ಕಲಿಸುವ ಒತ್ತಾಯ ಹೇರಿದರೆ ಆಗುವ ಪರಿಣಾಮಗಳು ಏನು ?

2) ಸಂವಿಧಾನದಲ್ಲಿ ಹಿಂದಿ ಕನ್ನಡ ಸೇರಿ ಸುಮಾರು 22 ಭಾಷೆಗಳಿಗೆ ಸಮನಾದ ಪ್ರಾದೇಶಿಕ ಸ್ಥಾನ ನೀಡಿರುವಾಗ ಹಿಂದಿ ಹೇರಿಕೆಯ ಅವಶ್ಯಕತೆ ಇದೆಯೇ ?

3) ಹಿಂದಿ ಭಾಷೆಯ ಒತ್ತಡಕ್ಕೆ ಸಿಲುಕಿಯೂ ಪ್ರಾದೇಶಿಕ ಭಾಷೆಗಳು ನಿಜಕ್ಕೂ ನಾಶವಾಗದೆ ಕನಿಷ್ಠ ಈಗಿನ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯವೇ ?

4) ಹಿಂದಿ ಭಾಷೆಯ ‌ಸ್ಪರ್ಧೆಯನ್ನು ಸಹಿಸಿಕೊಳ್ಳಲಾರದಷ್ಟು ದುರ್ಬಲವೇ ಈ ಭಾಷೆಗಳು ? ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಭಾಷೆ ಬಂದರು ನಮ್ಮ ಭಾಷೆಯಲ್ಲಿ ಸಾಮರ್ಥ್ಯ ಮತ್ತು ನಂಬಿಕೆ ಅಚಲವಾಗಿದ್ದರೆ ಭಯಪಡುವುದೇಕೆ ?

5) ಜನಸಂಖ್ಯೆಯ ಆಧಾರದಲ್ಲಿ ಸ್ವಲ್ಪ ಹೆಚ್ಚು ಜನ ಮಾತನಾಡುತ್ತಾರೆ ಎಂಬ ಕಾರಣದಿಂದಾಗಿ ಹಿಂದಿ ರಾಷ್ಟ್ರ ಭಾಷೆಯಾಗಬೇಕು ಎಂಬುದು ಈ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ಒಪ್ಪುವಂತ ವಿಷಯವೇ ?

6) ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲದ ಆದರೆ ಹಿಂದಿ ಭಾಷೆಯಲ್ಲಿ ಮಾತ್ರ ಇರುವ ವಿಶೇಷತೆ ಏನು ? ಮತ್ತು ಅದರಿಂದಾಗಿ ಆಡಳಿತಾತ್ಮಕ , ಸಾಂಸ್ಕೃತಿಕ ಮತ್ತು ದೇಶದ ಐಕ್ಯತೆಯನ್ನು ಹೆಚ್ಚಿಸುವ ಅಂಶಗಳು ಹಿಂದಿಯಲ್ಲಿ ಇದೆಯೇ ? ಹಿಂದಿಯಿಂದ‌ ದೇಶದ ಆಡಳಿತ ಸುಗಮವಾಗುವುದೇ ? ದೇಶದ ಅನಕ್ಷರಸ್ಥರ‌ ಸಂಖ್ಯೆ ನೆನಪಿದೆಯೇ ?

7) ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸಬೇಕು ಎಂದು ಹೇಳುತ್ತಿರುವವರು ವಿದ್ವಾಂಸರೇ – ತತ್ವಜ್ಞಾನಿಗಳೇ – ಭಾಷಾ ಪಂಡಿತರೇ – ಭಾರತದ ಸಾಂಸ್ಕೃತಿಕ ವಕ್ತಾರರೇ ? ಜಗದ್ವಿಖ್ಯಾತ ಸಂಶೋದಕರೇ? ಅಥವಾ ಕೇವಲ ಅಧಿಕಾರ ಹೊಂದಿರುವ ರಾಜಕಾರಣಿಗಳೇ‌ ?

8) ಭಾಷೆ ಒಂದು ಸಂವಹನ ಕಲೆ ಮಾತ್ರವೇ ? ಅಥವಾ ಭಾಷೆ ದೇಹದ ಒಂದು ಭಾಗವೇ ? ನಮ್ಮ ನಡವಳಿಕೆ ಸ್ವರೂಪವೇ ? ನಮ್ಮ ಸಂಸ್ಕೃತಿಯ ಜೀವನಾಡಿಯೇ ? ನಮ್ಮ ಅನ್ನ ಮಾರ್ಗವೇ ? ಒಂದು ವ್ಯಕ್ತಿತ್ವವೇ ?

9) ಬದುಕಲು ಯಾವ ಭಾಷೆಯಾದರೇನು ? ಹೇಗೋ ಬದುಕಿದರೆ ಸಾಕು ಎಂದು ದಿವ್ಯ ನಿರ್ಲಕ್ಷ್ಯ ವಹಿಸಬಹುದಾದ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವಷ್ಟು ಸಣ್ಣ ವಿಷಯವೇ ಇದು ?

9) ಅಕಸ್ಮಾತ್ ಕೆಲವು ಕನ್ನಡ ಹೋರಾಟಗಾರರು ಕೋಪದಲ್ಲಿ ಒಂದಷ್ಟು ಆಕ್ರೋಶವಾಗಿ ಮಾತನಾಡಬಹುದು, ಜೀವನೋಪಾಯಕ್ಕಾಗಿ ಭಾಷೆಯನ್ನು ಬಳಸುತ್ತಿರಬಹುದು, ಹಿಂದಿ ಹೇರಿಕೆಯನ್ನು ವಿರೋಧಿಸುವವರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಿರಬಹುದು, ಕನ್ನಡ ಅಭಿಮಾನಿಗಳು ಹಿಂದಿ ಸಿನಿಮಾಗಳನ್ನೇ ಹೆಚ್ಚಾಗಿ ನೋಡಬಹುದು ಎಂಬ ಈ ಕಾರಣ ಮತ್ತು ನೆಪಗಳನ್ನು ಹೇಳಿ ಮತ್ತು ಅವರ ಆತ್ಮಶಕ್ತಿ – ವಾದ ಸಮರ್ಥನೆಯಲ್ಲಿ ಅಸಮರ್ಥರನ್ನಾಗಿ ಮಾಡಿ ( D – MORALISE ) ಅತ್ಯಂತ ಮಹತ್ವದ ಕನ್ನಡದ ಮೇಲೆ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳಬಹುದೇ ? ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಒಡಕು ಮೂಡುವುದು ಸರಿಯೇ ?
ಕೆಲವು ಲೋಪಗಳನ್ನು ಪ್ರತ್ಯೇಕವಾಗಿ ಚರ್ಚಿಸಬಹುದಲ್ಲವೇ ?

11) ನಮ್ಮ ದೇಶವನ್ನು ಆಳಿ – ಕೊಳ್ಳೆ ಹೊಡೆದು ಕೊಡಬಾರದ ಕಷ್ಟ ಕೊಟ್ಟು ಇಲ್ಲಿಂದ ಪರಾರಿಯಾದ ಪರಕೀಯ ಭಾಷೆ ಮತ್ತು ನಮ್ಮ ದೇಶದ ಎಲ್ಲಾ ರಾಜ್ಯಗಳ ಬಹುತೇಕ ಶಿಕ್ಷಣ ಸಂವಹನ ಆಕರ್ಷಕ ಉದ್ಯೋಗದಾತ ಮತ್ತು ಪ್ರತಿಷ್ಟೆ ಎನಿಸಿಕೊಂಡಿರುವ ಇಂಗ್ಲೀಷ್ ಭಾಷೆಯೇ ವ್ಯಾಪಕವಾಗಿರುವಾಗ ನಮ್ಮ ನೆಲದ ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸುವುದು ಸರಿಯೇ ?

12) ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ, ಇಂಗ್ಲೀಷ್ ಭಾಷೆಯನ್ನು ಸರ್ಕಾರದ ಯಾವುದಾದರೂ ಆಡಳಿತ ಒತ್ತಾಯಪೂರ್ವಕವಾಗಿ ಹೇರಿದರೆ ಅಥವಾ ಸ್ವತಃ ಕನ್ನಡ ಹಿಂದಿ ಮುಂತಾದ ಮಾಧ್ಯಮ ಶಾಲೆಗಳು ಇದ್ದರೂ ಜನರೇ ತಮ್ಮ ಸ್ವ ಇಚ್ಛೆಯಿಂದ ಇಂಗ್ಲೀಷ್ ಆಯ್ಕೆ ಮಾಡಿಕೊಂಡರೆ ?

13) ಒಂದು ವೇಳೆ ಇಂಗ್ಲೀಷ್ ಭಾಷೆಯ ಮಾದರಿಯಲ್ಲಿ ಹಿಂದಿ ಎಲ್ಲಾ ಜನರ ಸ್ವಯಂ ಆಯ್ಕೆಯಾಗುವುದಾದರೆ ಯಾರೂ ತಡೆಯುವುದು ಸಾಧ್ಯವಿಲ್ಲ ಅಲ್ಲವೇ ? ಹಾಗಿದ್ದಲ್ಲಿ ಒತ್ತಾಯಪೂರ್ವಕ ಏಕೆ ?

14) ಸಂವಿಧಾನಾತ್ಮಕವಾಗಿ ನಮ್ಮ ಸ್ವ ಇಚ್ಛೆಯಿಂದ ಯಾವುದೇ ಭಾಷೆಯನ್ನು ಕಲಿಯುವ, ಆ ಭಾಷೆಯ ಸಾಹಿತ್ಯ ಓದುವ, ಸಿನಿಮಾ ನೋಡುವ, ಅದನ್ನು ಅಭಿಮಾನಿಸುವ, ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇರುವಾಗ ಈ ” ಹೇರಿಕೆ ” ಯ ಹುನ್ನಾರವೇನು ?

15) ತಾಯಿಭಾಷೆಯೇ ನಮ್ಮೆಲ್ಲಾ ಕಲಿಕೆಯ, ನಮ್ಮೊಳಗಿನ ಅಂತಃಶಕ್ತಿಯ ನಿಜವಾದ ಕಾರಣ ಎಂದು ವಿಶ್ವ ಇತಿಹಾಸದ ಎಲ್ಲಾ ವಿಷಯ ತಜ್ಞರು ಹೇಳಿರುವಾಗ ಈ ಹೇರಿಕೆ ಸರಿಯೇ ? ತಮ್ಮದಲ್ಲದ ಭಾಷೆಯನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರಿದಾಗ ಮಾತೃಭಾಷೆ ಹಿಂದಿಯ ಮಕ್ಕಳ ನಡುವೆ ನಮ್ಮ ಮಕ್ಕಳು ನಲುಗುವುದಿಲ್ಲವೇ ?

16) ದಯವಿಟ್ಟು ಗಮನಿಸಿ. ಈ ಹೇರಿಕೆ ಮೇಲ್ನೋಟಕ್ಕೆ ಮಾಡುವ ಅಪಾಯಕ್ಕಿಂತಲೂ ದೀರ್ಘಕಾಲದಲ್ಲಿ ಅದು ನಮ್ಮ ಇಡೀ ಸಾಂಸ್ಕೃತಿಕ ವ್ಯಕ್ತಿತ್ವವನ್ನೇ ಆಪೋಶನ ತೆಗೆದುಕೊಂಡು ನಮ್ಮನ್ನು ಭಾಷಾ ಅಸ್ಪೃಶ್ಯರನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳೂ ಕಾಣುವುದಿಲ್ಲವೇ ? ಮಾತೃಭಾಷೆಯ ಜೊತೆ ಇದೊಂದು ಪೂರಕ ಭಾಷೆ ಎಂದು ಹೇಳಲಾಗುತ್ತದೆ. ಆದರೆ ಒಳಗಿನ ಲೆಕ್ಕಾಚಾರವೇ ಬೇರೆ ಎಂಬ ಅನುಮಾನ ಕಾಡುವುದಿಲ್ಲವೇ ?

ಹೀಗೆ ಸಾಗುವ ಮತ್ತು ಮನದಲ್ಲಿ ಮೂಡುವ ಅನೇಕ ಪ್ರಶ್ನಾವಳಿಗಳಿಗೆ ಸೂಕ್ಷ್ಮವಾಗಿ ಉತ್ತರ ಹುಡುಕಿಕೊಂಡಾಗ ನಮಲ್ಲಿ ಮೂಡುವ ಸಮಷ್ಟಿ ಪ್ರಜ್ಞೆಯ ಜ್ಞಾನದಿಂದ ಹಿಂದಿ ಭಾಷೆಯ ಹೇರಿಕೆಯ ಬಗ್ಗೆ ಒಂದು ಅಭಿಪ್ರಾಯ ರೂಪಿಸಿಕೊಳ್ಳಬಹುದು.

ಒಟ್ಟಿನಲ್ಲಿ,
ಹಿಂದಿ ಅಥವಾ ಇನ್ಯಾವುದೇ ಭಾಷೆಯ ಬಗ್ಗೆ ಯಾರಿಗೂ ದ್ವೇಷ ಅಸೂಯೆ ಇಲ್ಲ. ಆ ಭಾಷೆಯ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ನಮ್ಮ ಮೇಲೆ ‌ತಾಯಿಭಾಷೆ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ‌ಹೇರಿಕೆ ಮಾಡುವುದರ ವಿರುದ್ಧ ಮಾತ್ರ ಪ್ರತಿಭಟನೆ ಮಾಡಬೇಕಿದೆ.
ಭಾರತದ ಒಕ್ಕೂಟ ವ್ಯವಸ್ಥೆಯ ನಿಜವಾದ ಶಕ್ತಿ ಅಡಗಿರುವುದು ಇಲ್ಲಿನ ವೈವಿಧ್ಯತೆಯಿಂದಲೇ ಎಂಬುದನ್ನು ಮರೆಯದಿರೋಣ. ರಾಜಕೀಯ ಹೊರತುಪಡಿಸಿ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ.

ಬೇರೆ ದೇಶಗಳ ಏಕ ಭಾಷೆ ಏಕ ಸಂಸ್ಕೃತಿಯ ಆದರ್ಶ ನಮಗೆ ಒಗ್ಗುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಸಹ ಸ್ವಾಗತಿಸುತ್ತಾ, ಗೌರವಿಸುತ್ತಾ…..
ಲೇಖನ-ವಿವೇಕಾನಂದ. ಎಚ್.ಕೆ.
9844013068……..

- Advertisement -  - Advertisement - 
Share This Article
error: Content is protected !!
";