ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಟಿ ಹಬ್ ಬೆಳ್ಳಂದೂರಿನಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ರಕ್ಷಣಾ ಇಲಾಖೆಯಿಂದ 22 ಎಕರೆ ಜಮೀನು ಖರೀದಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಎಕ್ಸ್ ಖಾತೆಯಿಂದ ವಿಷಯ ಟ್ವೀಟ್ ಮಾಡಿ ಮಾತನಾಡಿ, ಜಮೀನು ಖರೀದಿ ಸಂಬಂಧ ಈಗಾಗಲೇ ರಕ್ಷಣಾ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇನೆ.
ಟ್ರಾಫಿಕ್ ಸಮಸ್ಯೆ ನಿವಾರಿಸಲು ರಸ್ತೆ ನಿರ್ಮಾಣಕ್ಕೆ 12 ಎಕರೆ ಜಮೀನು ಕೊಡಲು ಒಪ್ಪಿಗೆ ಕೊಟ್ಟಿದ್ದಾರೆ. ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕರೆದಿದ್ದೇನೆ. ಹೀಗಾಗಿ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಅವರನ್ನು ಕರೆದು ಧನ್ಯವಾದ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಹೆಬ್ಬಾಳ ಕಡೆಗೂ 10 ಎಕರೆ ಜಾಗ ನೀಡಿ ಅಂತ ಕೇಳಿದ್ದೇನೆ. ಒಟ್ಟು 22 ಎಕರೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ. ಬೆಂಗಳೂರು ನಗರದಲ್ಲಿ ಇನ್ನೂ ತುಂಬಾ ಗುಂಡಿಗಳಿವೆ. ಅವುಗಳ ದುರಸ್ತಿ ಮಾಡುತ್ತೇವೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇನ್ನೊಂದು ರಿವೀವ್ ಮೀಟಿಂಗ್ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ನೂರು ವರ್ಷ ಆಗಿದೆ. ಅದಕ್ಕಾಗಿ ಈ ಬಾರಿಯ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಚಿಂತಿಸಿದ್ದೇವೆ. ಮೊದಲ ಹಂತವಾಗಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲಾ, ತಾಲೂಕಿನ ಹಾಗೂ ಪಾಲಿಕೆಗಳ ಮಟ್ಟದಲ್ಲಿ ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. ಇದು ಒಂದು ಕಿಮೀ ನಡಿಗೆ ಇರುತ್ತದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಗಾಂಧಿ ಭವನದಿಂದ ಗಾಂಧಿ ಪ್ರತಿಮೆಯವರೆಗೂ ನಡಿಗೆ ಹಮ್ಮಿಕೊಂಡಿದ್ದೇವೆ. ಪಕ್ಷ ಭೇದ ಮರೆತು ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಡಿಸಿಎಂ ಕರೆ ನೀಡಿದರು.
ಸ್ವಚ್ಛತೆಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದೇ ವೇಳೆ ಸ್ವಚ್ಛತೆ ಕಾಪಾಡಲು ಪ್ರತಿಜ್ಞೆ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿ ಆ್ಯಪ್ ಸಹ ತಯಾರು ಮಾಡುತ್ತಿದ್ದೇವೆ.
ಎಲ್ಲರೂ ಕೂಡ ಇದರಲ್ಲಿ ಭಾಗಿಯಾಗಬೇಕು. ಸ್ವಚ್ಛತೆ ಬಗ್ಗೆ ನಾವು ಈ ಕಾರ್ಯಕ್ರಮ ಮಾಡುತ್ತೇವೆ. ಒಂದು ವರ್ಷ ಒಂದೊಂದು ಕಡೆ ಈ ಕಾರ್ಯಕ್ರಮ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.