ಚಂದ್ರವಳ್ಳಿ ನ್ಯೂಸ್, ತುಮಕೂರು:
ಪೊಲೀಸರು ಕಳ್ಳನನ್ನ ಹಿಡಿಯಲು ಹೋದ ಸಂದರ್ಭದಲ್ಲಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ.
ಕಳ್ಳನನ್ನ ಹಿಡಿಯಲು ಪೊಲೀಸರ ಕಾರು ಮುಂದಾಗುತ್ತಿದ್ದಂತೆ ಪೊಲೀಸರ ಕಾರು ಅಪಘಾತಕ್ಕೀಡಾಗಿದೆ. ತುಮಕೂರಿನ ಮಧುಗಿರಿ ಠಾಣೆಯ ಮೂವರು ಪೊಲೀಸರಿಗೆ ಗಂಭೀರ ಗಾಯವಾಗಿದೆ.
ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್ಗೆ ಗಂಭೀರ ಗಾಯವಾಗಿದೆ.
ಆಂಧ್ರಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ. ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆ ಬಳಿ 70 ಗ್ರಾಂ ಚಿನ್ನದ ಸರ ಕದ್ದು ಖದೀಮನೊಬ್ಬ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಕಳ್ಳನ ಜಾಡು ಹಿಡಿದು ಹೊರಟಿದ್ದ ಮಧುಗಿರಿ ಪೊಲೀಸರು ಕಳ್ಳನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ, ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ.
ಪರಿಣಾಮ ಪೊಲೀಸ್ಸಿಬ್ಬಂದಿಯ ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಅದೃಷ್ಟವಶಾತ್ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದ ಧರ್ಮವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.