ಬೆಣ್ಣೆ ನಗರಿಯಲ್ಲಿ ಬಿಜೆಪಿ ಅತೃಪ್ತರ ಸಭೆ, ವಿಜಯೇಂದ್ರ ವಿರುದ್ಧ ಬಂಡಾಯ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸೆ. 29ರಂದು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಅಲ್ಲಿನ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರ ಗೆಸ್ಟ್ ಹೌಸ್ ನಲ್ಲಿ ಬಿಜೆಪಿ ಅತೃಪ್ತರ ಸಭೆಯನ್ನು ಆಯೋಜಿಸಲಾಗಿದ್ದು, ಅಲ್ಲಿಗೆ ಬೆಳಗ್ಗೆಯಿಂದಲೇ ಬಿಜೆಪಿಯ ಕೆಲವು ಪ್ರಮುಖ ನಾಯಕರು ಪದಾರ್ಪಣೆ ಮಾಡಿದ್ದಾರೆ.

ಸಭೆ ಆರಂಭವಾಗಿದ್ದು, ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.ಈ ಸಭೆಗೆ, ದಾವಣಗೆರೆಯ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗ್ಗೆಯೇ ವಿಜಯಪುರದ ಶಾಸಕ ಯತ್ನಾಳ್ ಅವರು ದಾವಣಗೆರೆಗೆ ಆಗಮಿಸಿದ್ದಾರೆ.

ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದಾರೆ. ಹರಿಹರದ ಶಾಸಕ ಬಿ.ಪಿ. ಹರೀಶ್ ಅವರು ಆಗಮಿಸಿದ್ದಾರೆ. ಅತ್ತ, ಗೋಕಾಕ್ ನಿಂದ ಅಲ್ಲಿನ ಶಾಸಕ ರಮೇಶ್ ಜಾರಕಿಹೊಳಿಯವರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇತ್ತೀಚೆಗೆ ಗಣೇಶೋತ್ಸವ ಮೆರವಣಿಗೆ ನಡೆಯುವ ಸಂದರ್ಭಗಳಲ್ಲಿ ರಾಜ್ಯದ ಕೆಲವು ಕಡೆಗಳಲ್ಲಿ ಗಲಭೆಗಳಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತಿದ್ದೇವೆ. ಹಿಂದೂ ಧರ್ಮದ ಉಳಿವು ಹಾಗೂ ಏಳ್ಗೆಗಾಗಿ ಬಿಜೆಪಿಯಿಂದ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗಿದೆ.

ಆದರೆ, ಸಭೆಯ ಒಳ ಉದ್ದೇಶ ಬೇರೆಯದ್ದೇ ಇದೆ ಎಂದು ಹೇಳಲಾಗುತ್ತಿದೆ. ಸಭೆಯ ಅಸಲಿ ಉದ್ದೇಶವೇನು? ಸಭೆಯಲ್ಲಿ ಅಸಲಿ ಉದ್ದೇಶವೇ ಬಿಜೆಪಿ ನಾಯಕತ್ವವನ್ನು ಬದಲಾಯಿಸುವುದು ಎಂದು ಹೇಳಲಾಗಿದೆ. ಬರುವ ನವೆಂಬರ್ ನಲ್ಲಿ ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ಒಂದು ವರ್ಷವಾಗುತ್ತದೆ.

ಅದಕ್ಕೂ ಮುನ್ನವೇ ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುವುದು, ಅದಕ್ಕೆ ಬೇಕಾದ ರೂಪುರೇಷೆಗಳನ್ನು ನಿರ್ಧರಿಸುವ ಬಗ್ಗೆ ಸಭೆಯಲ್ಲಿ ಪ್ರಾಥಮಿಕ ಹಂತದ ಚರ್ಚೆಗಳಾಗಿವೆ ಎಂದು ಹೇಳಲಾಗಿದೆ. ಇದರ ಜೊತೆಗೆ, ರಾಜ್ಯ ಬಿಜೆಪಿ ನಾಯಕತ್ವಕ್ಕೆ ಪರ್ಯಾಯವಾಗಿ ತಮ್ಮನ್ನು ಬೆಳೆಯಲು ಬಿಡದ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗಿದೆ.

ಇತ್ತೀಚೆಗೆ ವಿಜಯೇಂದ್ರ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದ ಬಿಜೆಪಿ – ಜೆಡಿಎಸ್ ಮೈತ್ರಿಯ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಬಳ್ಳಾರಿ ಪಾದಯಾತ್ರೆಯನ್ನು ಕೈಗೊಳ್ಳಲು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದರು.

ಆದರೆ, ಅದಕ್ಕೆ ಹೈಕಮಾಂಡ್ ಅನುಮತಿ ಕೊಡಲಿಲ್ಲ. ಈ ವಿಚಾರವೂ ಸಹ ಸಭೆಯಲ್ಲಿ ಚರ್ಚೆಯಾಗಿದೆ. ನವಂಬರ್ ನಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ? ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ಬಿಜೆಪಿಯಲ್ಲಿ ತುರುಸಿನ ಚಟುವಟಿಕೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ.

ಈಗಾಗಲೇ ಕೆಲವು ತಿಂಗಳುಗಳಿಂದಲೂ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಹಿಡಿತವೇ ಜೋರಾಗಿದೆ. ಅವರು ಹಾಗೂ ಅವರ ಬೆಂಬಲಿಗರು ಬಿಜೆಪಿಯ ಇತರ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ. ಯತ್ನಾಳ್ ಹಾಗೂ ಜಾರಕಿಹೊಳಿಯವರು, ವಿಜಯೇಂದ್ರ ಅವರು ನಮ್ಮ ನಾಯಕರಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ.

ಬಿಜೆಪಿಯಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುತ್ತಿರುವ ಈ ನಾಯಕರು, ಇತ್ತೀಚೆಗೆ ವಿಧಾನಸೌಧದ ಮುಂದೆ ನಡೆದ ಮುಡಾ ವಿಚಾರದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ದಿನ, ಬೆಂಗಳೂರಿನಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರು ಸಭೆ ಸೇರಿದ್ದರು.

ಅದೇ ದಿನ ಎರಡು ಸಭೆಗಳು ನಡೆದಿವೆ. ಒಂದು ಸಭೆಯು ಈಶ್ವರಪ್ಪ ಮನೆಯಲ್ಲಿ ಒಂದು ಸಭೆ ನಡೆದರೆ, ಮತ್ತೊಂದು ಸಭೆಯ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ನಡೆದಿದೆ. ಅಲ್ಲಿಗೆ, ಈಗಾಗಲೇ ಪಕ್ಷದಿಂದ ಉಚ್ಛಾಟನೆಗೊಂಡಿರುವ ಈಶ್ವರಪ್ಪನವರ ಬೆಂಬಲ, ಈ ಬಿಜೆಪಿ ಭಿನ್ನಮತೀಯರಿಗೆ ಇದೆ ಎಂದು ಹೇಳಲಾಗಿದೆ.

ಈಶ್ವರಪ್ಪನವರ ಬಾಹ್ಯ ಬೆಂಬಲ?ನಾಲ್ಕೈದು ದಶಕಗಳಿಂದಲೂ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದರೂ ತಮ್ಮನ್ನು ಪಕ್ಷದಿಂದ ಹೊರಹಾಕಿದ್ದಾರೆ ಎಂಬ ಮುನಿಸು ಬಿಜೆಪಿ ಹೈಕಮಾಂಡ್ ಮೇಲೆ ಮಾಜಿ ಸಚಿವ ಈಶ್ವರಪ್ಪನವರಿಗೆ ಇರುವುದು ಗೌಪ್ಯವಾಗೇನೂ ಉಳಿದಿಲ್ಲ. ಅತ್ತ ಅವರು, ಪ್ರತ್ಯೇಕವಾಗಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಕಟ್ಟಲು ತಯಾರಿ ನಡೆಸಿದ್ದಾರೆ.

ಮತ್ತೊಂದು ಕಡೆ, ರಮೇಶ್ ಜಾರಕಿಹೊಳಿಯವರು ಸಹ ಅದಕ್ಕೆ ಬೆಂಬಲ ಸೂಚಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಇವರ ಜೊತೆಗೆ, ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಸೆಟೆದು ನಿಂತಿರುವ ಹಲವಾರು ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ, ಈಶ್ವರಪ್ಪನವರ ಜೊತೆಗೆ ಕೈ ಜೋಡಿಸಿದ್ದಾರೆನ್ನಲಾಗಿದೆ.

ಯತ್ನಾಳ್ ಕೂಡ ಈ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಆದರೆ ಇವರ ಜೊತೆಗೆಯಲ್ಲಿ ಪ್ರತಾಪ್ ಸಿಂಹ, ಬಿಪಿ ಹರೀಶ್, ರಾಜೂಗೌಡ ಮುಂತಾದವರು ಕಾಣಿಸಿಕೊಂಡಿರುವದು ಹಾಗೂ ಈ ತಂಡಕ್ಕೆ ಈಗ ಸಿದ್ದೇಶ್ವರ ಅವರು ಪದಾರ್ಪಣೆ ಮಾಡಿರುವುದು ಕೊಂಚ ಅಚ್ಚರಿಯನ್ನುಂಟುಮಾಡಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";