ತಿರುಪತಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಎನ್ನುವುದಕ್ಕೆ ಸಾಕ್ಷ್ಯ ಏನಿದೆ-ಸುಪ್ರೀಂ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ತಿರುಪತಿಯಲ್ಲಿ ಲಡ್ಡು ತಯಾರಿಕೆ ಮಾಡಲು ಕಲಬೆರಕೆ ತುಪ್ಪ ಬಳಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಏನಿದೆ? ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ರಾಜಕಾರಣದಿಂದ ದೇವರನ್ನಾದರೂ ದೂರವಿರಿಸಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ತಿರುಮಲ ತಿಮ್ಮಪ್ಪನ ಲಡ್ಡು ವಿಷಯವಾಗಿ ತನಿಖೆಗೆ ಆದೇಶಿಸಿರುವಾಗ ಸಾರ್ವಜನಿಕವಾಗಿ ಹೇಳಿಕೆ ನೀಡುವ ಅಗತ್ಯವೇನಿದೆ? ಎಂದು ಬಿಆರ್ ಗವಾಯಿ ಹಾಗೂ ಕೆ ವಿಶ್ವನಾಥನ್ ಅವರಿದ್ದ ಪೀಠ ಪ್ರಶ್ನಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದು ನಂಬಿಕೆಯ ವಿಷಯವಾಗಿದೆ ಮತ್ತು ಲಡ್ಡುಗಳ ತಯಾರಿಕೆಯಲ್ಲಿ ಕಲುಷಿತ ತುಪ್ಪ ಬಳಸಿದರೆ ಅದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪ ಬಳಸಲಾಗಿದೆ ಎಂಬುದಕ್ಕೆ ಪುರಾವೆಗಳ ಬಗ್ಗೆ ನ್ಯಾಯಾಲಯ ಆಂಧ್ರ ಪ್ರದೇಶ ಸರ್ಕಾರವನ್ನು ಕೇಳಿದೆ. ಟಿಡಿಪಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಲಡ್ಡುಗಳು ರುಚಿಯಾಗಿಲ್ಲ ಎಂದು ಜನರು ದೂರಿದ್ದಾರೆ ಎಂದು ಹೇಳಿದರೆ, ಸಾರ್ವಜನಿಕರಿಗೆ ಈ ಬಗ್ಗೆ ತಿಳಿದಿರಲಿಲ್ಲ, ನೀವು ಕೇವಲ ಹೇಳಿಕೆ ನೀಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಲುಷಿತ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರ ಉತ್ತರ ನೀಡಿದೆ. ಹಾಗಾದರೆ ತಕ್ಷಣ ಪತ್ರಿಕಾಗೋಷ್ಠಿಗೆ ಹೋಗುವ ಅಗತ್ಯ ಏನಿತ್ತು? ನೀವು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಬ್ರಮಣ್ಯಂ ಸ್ವಾಮಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಜಶೇಖರ್ ರಾವ್ ಅವರು, ತಾವು ಇಲ್ಲಿ ಭಕ್ತನಾಗಿ ಬಂದಿದ್ದೇನೆ ಮತ್ತು ಪ್ರಸಾದದಲ್ಲಿನ ಮಾಲಿನ್ಯದ ಬಗ್ಗೆ ಪತ್ರಿಕೆಗಳಲ್ಲಿ ನೀಡಿರುವ ಹೇಳಿಕೆಯು ದೂರಗಾಮಿ ಪರಿಣಾಮಗಳನ್ನು ಹೊಂದಿದೆ ಮತ್ತು ಇತರ ಹಲವು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಮತ್ತು ಕೋಮು ಸೌಹಾರ್ದತೆಗೆ ಭಂಗ ತರಬಹುದು ಎಂದು ಹೇಳಿದರು.

ಇವು ಕಾಳಜಿಯ ವಿಷಯಗಳು. ದೇವರ ಪ್ರಸಾದದ ಗುಣಮಟ್ಟದ ಬಗ್ಗೆ ಅನುಮಾನಗಳಿದ್ದರೆ ಅದನ್ನು ಪರಿಶೀಲಿಸಬೇಕು. ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";