ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗ್ರಾಮೀಣ ಸಾರಿಗೆ ಬಸ್ ಡಿಪೋ ಪ್ರಾರಂಭ ಮಾಡದೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸಿ ಅಹೋರಾತ್ರಿ ಧರಣಿ ನಡೆಸಿದರು.
ತಾಲೂಕ್ ತಹಶೀಲ್ದಾರ್ ರಾಜೇಶ್ ಕುಮಾರ್ ರವರ ಮುಖಾಂತರ ಕೆಎಸ್ಆರ್ ಟಿಸಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಕೆ ಎಸ್ ಆರ್ ಟಿ ಸಿ ಡಿಪೋ ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಾಕಷ್ಟು ಬಾರಿ ಪ್ರತಿಭಟಿಸಿದ್ದರು ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಗಮನ ನೀಡುತ್ತಿಲ್ಲ ಎಂದು ದೂರಿದರು.
ಹಿರಿಯೂರು ತಾಲೂಕು ಕೇಂದ್ರ ಮಧ್ಯ ಕರ್ನಾಟಕದ ಹೆಬ್ಬಾಗಿಲು, ಈ ಸ್ಥಳದಿಂದ ಹಲವು ಜಿಲ್ಲೆಗಳಿಗೆ ಸಂಪರ್ಕ ಸಾಧಿಸಬಹುದಾಗಿದೆ. ಕೆಎಸ್ಆರ್ಟಿಸಿ ಡಿಪೋ ಆರಂಭವು 2008 ರಿಂದ ನೆನೆಗುದಿಗೆ ಬಿದ್ದಿದೆ. ಡಿಪೋ ಕಾಮಗಾರಿ ಸಂಪೂರ್ಣ ಮುಗಿದು ಹಲವು ತಿಂಗಳಾಗಿದ್ದರೂ ಏಕೆ ಡಿಪೋ ಪ್ರಾರಂಭಿಸುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಪ್ರಶ್ನಿಸಿದರು.
ಹಿರಿಯೂರು ತಾಲೂಕಿನ ಗ್ರಾಮೀಣ ಭಾಗ ಅತ್ಯಂತ ದೂರದಲ್ಲಿದೆ. ಹಲವು ಬಸ್ ಗಳ ಸಂಚಾರ ಮಾಡುವ ಅವಕಾಶ ಇದ್ದರೂ ಕೇವಲ ಐದು ಬಸ್ಸುಗಳು ಮಾತ್ರ ಸಂಚಾರಿಸುತ್ತಿವೆ. ಸರಿಯಾಗಿ ಆ ಬಸ್ಗಳು ಬರುವುದಿಲ್ಲ, ಒಂದು ಟ್ರಿಪ್ ಬಂದರೆ ಇನ್ನೊಂದು ಟ್ರಿಪಲ್ಲಿ ಬಸ್ ಸಮಸ್ಯೆ ಇದೆ ಎಂದು ಹೇಳುತ್ತಾರೆ, ಇದು ತಾಲೂಕು ಆಡಳಿತಕ್ಕೆ ಮುಜುಗರ ತರುವ ವಿಚಾರ ಎಂದು ಅವರು ಕಿಡಿ ಕಾರಿದರು.
ರೈತ ಸಂಘಟನೆ ಡಿಪೋ ಪ್ರಾರಂಭವಸುವಂತೆ ಹೋರಾಟ ಮಾಡುತ್ತಲೇ ಬಂದಿದೆ. ಅಧಿಕಾರಿ ವರ್ಗದವರು ಡಿಪೋ ಪ್ರಾರಂಭವಾದ ನಂತರ ಗ್ರಾಮೀಣ ಭಾಗದಲ್ಲಿ ಬಸ್ ಓಡಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅಧಿಕಾರಿಗಳು ನಿರ್ಲಕ್ಷತನದಿಂದಾಗಿ ಡಿಪೋ ಪ್ರಾರಂಭವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಜನರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಹಿರಿಯೂರು ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿವೆ.
ಹಿರಿಯೂರು ನಗರಕ್ಕೆ ಬೇರೆ ಬೇರೆ ಡಿಪೋ ಬಸ್ಸುಗಳು ಹಿರಿಯೂರು ನಗರದೊಳಗೆ ಬರದೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತವೆ. ಜನರು ಬಸ್ ನಿಲ್ದಾಣದಲ್ಲಿ ಬಸ್ಸುಗಳಗಾಗಿ ಕಾದು ಕುಳಿತಿರುತ್ತಾರೆ. ವಿದ್ಯಾರ್ಥಿಗಳು ಸಾರ್ವಜನಿಕರು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹೋಗಲು ಬಸ್ಸುಗಳೇ ವ್ಯವಸ್ಥೆ ಇರುವುದಿಲ್ಲ ಎಂದು ದೂರಿದರು.
ಶಿರಾ ತುಮಕೂರು ಬಸ್ಸುಗಳು ಒಳಗಡೆ ಹೋಗುವುದಿಲ್ಲ. ಇದರ ಬಗ್ಗೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಕ್ರಮವಹಿಸಬೇಕೆಂದು ರೈತ ಸಂಘಟನೆ ತೀರವಾಗಿ ಖಂಡಿಸಿತು.
ಸಾರಿಗೆ ಡಿಪೋ ಪ್ರಾರಂಭಿಸಲು ವಿಳಂಬ ಮಾಡಿದರೆ ಬಸ್ ನಿಲ್ದಾಣ ಬಂದ್ ಮಾಡಲಾಗುತ್ತದೆ ಸಾರ್ವಜನಿಕರ ವಿದ್ಯಾರ್ಥಿಗಳ ರೈತರ ಸೇರಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಿರಿ ಸೇನೆ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಎಚ್ಚರಿಸಿದರು.
“ಹಿರಿಯೂರು ಡಿಪೋ ಕಾಮಗಾರಿ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕಾಮಗಾರಿಗಳಿವೆ. ಡೀಸೆಲ್ ಬಂಕ್ ಕಾಮಗಾರಿ ಮುಗಿದ ನಂತರ ನವೆಂಬರ್ ಅಂತ್ಯದೊಳಗೆ ಸಾರಿಗೆ ಡಿಪೋ ಪ್ರಾರಂಭಿಸಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವುದಾಗುತ್ತದೆ”.
ಶ್ರೀನಿವಾಸ್, ನಿಯಂತ್ರಣಾಧಿಕಾರಿಗಳು, ವಿಭಾಗೀಯ ಕಚೇರಿ, ಚಿತ್ರದುರ್ಗ.
“ಪಾರಿಜಾತ ಹೋಟೆಲ್ ಹತ್ತಿರ ಬಸ್ಗಳನ್ನ ನಿಲ್ಲಿಸುವುದರಿಂದ ರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಹಾಗೂ ವೃದ್ಧರಿಗೆ ಆ ಸಮಯದಲ್ಲಿ ನಗರದೊಳಗೆ ಬರಬೇಕೆಂದರೆ ತುಂಬಾ ತೊಂದರೆ ಆಗುತ್ತದೆ. ನಗರದೊಳಗಿನ ಹೋಟೆಲ್ ಗಳಲ್ಲಿ ಬಸ್ ಗಳ ನಿಲುಗಡೆ ಆದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಶಿರಾ ತುಮಕೂರು ಬಸ್ಸುಗಳು ಒಳಗಡೆ ಹೋಗದೆ ಇರುವುದು ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ಹೋಗುವ ಬಸ್ಸು ಶಿರಾ ತುಮಕೂರು ಒಳಗಡೆ ಹೋಗುವಂತೆ ಕ್ರಮವಹಿಸಬೇಕು. ಹಾಗೂ ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಲು ವಿಳಂಬ ಮಾಡಿದರೆ ಕೆಎಸ್ ಆರ್ ಟಿ ಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು”.
ಕೆ ಟಿ ತಿಪ್ಪೇಸ್ವಾಮಿ ಅಧ್ಯಕ್ಷರು, ರೈತ ಸಂಘ, ಹಿರಿಯೂರು.
ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ನಿಯಂತ್ರಣಾಧಿಕಾರಿ ನೇತ್ರಾವತಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಗೋವಿಂದ್ ರಾಜ್, ತಿಮ್ಮಣ್ಣ, ತಿಪ್ಪೇಸ್ವಾಮಿ, ರಂಗಸ್ವಾಮಿ, ತಿಮ್ಮಾರೆಡ್ಡಿ, ಅರಳಿಕೆರೆ ತಿಪ್ಪೇಸ್ವಾಮಿ, ಶಿವಣ್ಣ, ಹೊಸಕೆರೆ ಜಯಣ್ಣ, ನಾರಾಯಣಪ್ಪ, ಲಕ್ಷ್ಮಿಪತಿ, ಕೃಷ್ಣಮೂರ್ತಿ, ಕೆಂಚಪ್ಪ, ರಾಜಣ್ಣ, ಸಿದ್ದಪ್ಪ, ಚಂದ್ರಣ್ಣ, ಬಿ.ಆರ್ ರಂಗಸ್ವಾಮಿ, ಮಹಬೂಬ್, ರಾಮಕೃಷ್ಣಪ್ಪ ಇದ್ದರು.