ಸರ್ಕಾರಿ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ತಲುಪಬೇಕು- ಜಿಲ್ಲಾಧಿಕಾರಿ ಟಿ.ವೆಂಕಟೇಶ್   

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ಶೀಘ್ರವಾಗಿ ತಲುಪಬೇಕು, ವಿವಿಧ ನಿಗಮಗಳಡಿಯಲ್ಲಿನ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿದ್ದು, ನಿಗಮದವರು ಯೋಜನಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2022-23ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ನೇರಸಾಲ, ಮೈಕ್ರೋ ಕ್ರೆಡಿಟ್, ಉದ್ದಮಶೀಲತಾ ಯೋಜನೆಗಳಿಗೆ ನಿಗಧಿ ಪಡಿಸಿದ ಗುರಿಗಳನ್ನು ತಲುಪದಿರುವ ಕುರಿತು, ಹಾಗೂ 2023-24ನೇ ಸಾಲಿನಲ್ಲಿ ಯೋಜನೆಗಳ ಗುರಿ ಸಾಧನೆ ಶೂನ್ಯ ಇರುವುದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಗಳ ಫಲಾನುಭವಿಗಳಿಗೆ ಶೀಘ್ರವೇ ಸಹಾಯಧನ, ನೇರವಾಗಿ ಖಾತೆಗೆ ಜಮೆ ಮಾಡಲು ನಿಗಮದ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು. ನಿಗಮದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ. ಯೋಜನಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ನಗರಸಭೆ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ  ಕಚೇರಿಗಳ ಮಾಹಿತಿ ಫಲಕಗಳಲ್ಲಿ ಯೋಜನೆಗಳ ವಿವರಗಳನ್ನು ಪ್ರದರ್ಶಿಸಬೇಕು. ತಾಂತ್ರಿಕ ತೊಂದರೆಗಳನ್ನು ಶೀಘ್ರವೇ ಪರಿಹರಿಸುವಂತೆ ನಿಗಮದ ನಿರ್ದೇಶಕರಿಗೆ ಪತ್ರ ಕಳುಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

      2022-23ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 117 ಪೈಕಿ 50, ಉದ್ಯಮಶೀಲತಾ ಯೋಜನೆಯಡಿ 73 ಪೈಕಿ 16 ಫಲಾನುಭವಿಗಳ ಖಾತೆಗೆ ಸಹಾಯಧನ ವರ್ಗಾವಣೆ ಮಾಡಲಾಗಿದೆ. ಮೈಕ್ರೋ ಕ್ರೆಡಿಟ್ ಯೋಜನೆಯಡಿ 210 ಗುರಿ ನೀಡಲಾಗಿದ್ದು, ಯಾವುದೇ ಫಲಾನುಭವಿಗಳನ್ನು ಯೋಜನೆ ಲಾಭ ಪಡೆದಿಲ್ಲ. ಈ ಮೊದಲು ಯೋಜನೆಗಳ ಫಲಾನುಭವಿಗಳ ವಿವರವನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ನೊಂದಣಿ ಮಾಡಲಾಗುತ್ತಿತ್ತು. ಸದ್ಯ ವಿಶ್ವಾಸ್ ಎಂಬ ಹೊಸ ತಂತ್ರಾಂಶಕ್ಕೆ ವಿವರಗಳನ್ನು ವರ್ಗಾಹಿಸಬೇಕಾಗಿರುವುದರಿಂದ 2023-24 ನೇ ಸಾಲಿನಲ್ಲಿ ಯಾವುದೇ ಫಲಾನುಭವಿಗಳಿಗೆ ಸಹಾಯಧನ ವರ್ಗಾವಣೆಯಾಗಿಲ್ಲ ಎಂದು ನಿಗದ ವ್ಯವಸ್ಥಾಪಕ ನಾಗರಾಜ ಮಾಹಿತಿ ನೀಡಿದರು.

ಕಾಯ್ದೆಯ ದುರುಪಯೋಗ ಆಗಬಾರದು :
ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಧಿತರಿಗೆ ಶೀಘ್ರ ಪರಿಹಾರ ನೀಡಬೇಕು. ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿತರು ಪ್ರಕರಣಗಳಿಂದ ಮುಕ್ತರಾಗುತ್ತಿದಾರೆ. ದಾಖಲಾದ ಪ್ರಕರಣಗಳಿಗೆ ಹೊಲಿಸಿದರೆ ಶಿಕ್ಷೆಗೆ ಗುರಿಯಾದವರ ಪ್ರಮಾಣ ಅತ್ಯಂತ ಕಡಿಮೆ ಇರುವುದು ಕಳವಳಕಾರಿಯಾಗಿದೆ. ಇದರಿಂದ ಕಾಯ್ದೆ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ದೌರ್ಜನ್ಯ ನಿಯಂತ್ರಣ ಕಾಯ್ದೆಯ ದುರುಪಯೋಗ ಪಡಿಸಿಕೊಂಡು ಸುಳ್ಳು ಪ್ರಕರಣಗಳು ದಾಖಲಾಗಬಾರದು.

ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ ಪೊಲೀಸರು ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಳೆದ ಜೂನ್ ತಿಂಗಳಿನಿಂದ ಈವರೆಗೆ ಜಿಲ್ಲೆಯಾದ್ಯಂತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 32 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 3 ಪ್ರಕರಣಗಳಲ್ಲಿ ಸುಳ್ಳು ಆರೋಪ ಮಾಡಿರುವುದು ತನಿಖೆಯಿಂದ ಧೃಡಪಟ್ಟಿದೆ. ವಿಶೇಷ ಜಿಲ್ಲಾ ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ದಾಖಲಾದ 32 ಪ್ರಕರಣಗಳಲ್ಲಿ 42 ಜನ ಸಂತ್ರಸ್ತರಿದ್ದು, ಇವರೆಗೆ ಒಟ್ಟು ರೂ. 29.77 ಲಕ್ಷ ಪರಿಹಾರ ಧನವನ್ನು  ಸಂತ್ರಸ್ತರ ಖಾತೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದ ವೇಳೆ 116 ದೌರ್ಜನ್ಯ ಪಕ್ರರಣಗಳು ದಾಖಲಾಗಿವೆ. ಈ ಪೈಕಿ ಜನವರಿಯಲ್ಲಿ 6, ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ 2 ಹಾಗೂ ಏಪ್ರಿಲ್‍ನಲ್ಲಿ 1 ಪ್ರಕರಣಗಳಲ್ಲಿ ಆರೋಪಿಗಳು ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಯಲ್ಲಿ ಮಾಹಿತಿ ನೀಡಿದರು.

ವಲಸೆ ಮಕ್ಕಳ ವಿವರ ಪತ್ತೆಗೆ ಸೂಚನೆ :
ಜಿಲ್ಲೆಯಿಂದ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋದ ಮಕ್ಕಳ ವಿವರವನ್ನು ವಾರದಲ್ಲಿ ಶಿಕ್ಷಣ ಇಲಾಖೆಯಿಂದ ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ವಲಸೆ ಹೋದ 27 ಮಕ್ಕಳ ಪೈಕಿ ವಿವರ ಪತ್ತೆಯಾಗದ 18 ಮಕ್ಕಳನ್ನು ಪೊಲೀಸ್, ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಓಗಳ ಸಹಾಯದಿಂದ ಪತ್ತೆ ಹಚ್ಚಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಪತ್ರ ವ್ಯವಹಾರ ನಡೆಸಿ ಸುಮ್ಮನೆ ಕುಳಿತುಕೊಳ್ಳದೇ, ಬಿಇಓ ಹಾಗೂ ತಾಲ್ಲೂಕು ಪಂಚಾಯಿತಿ ಇಓ ಗಳು ಸ್ಥಳ ಪರಿಶೀಲನೆ ನಡೆಸಿ ವಿವರ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ಒಟ್ಟು 74 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಈ ಪೈಕಿ 69 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬೇರೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದು, ಇಲ್ಲಿ ನೆಲೆಸಿರುವವರ ಮಕ್ಕಳ ವಿವರಗಳನ್ನು ಪಡೆದು, ಆಯಾ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.

ಅಕ್ರಮ ಮದ್ಯ ಮಾರಾಟ ತಡೆಗೆ ನಿರ್ದೇಶನ:
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಪೆಟ್ಟಿಗೆ ಹಾಗೂ ತರಕಾರಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಖೇಧಕರ. ಅಬಕಾರಿ ಇಲಾಖೆಯಿಂದ ಹೆಚ್ಚಿನ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿ ಕಟ್ಟಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಇಂತಹ ಸ್ಥಳಗಲ್ಲಿ ಮದ್ಯ ಖರೀದಿಸಿ ಸೇವನೆ ಮಾಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಏರಿಯಾಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಕಂಡುಬರುತ್ತಿದೆ ಇವುಗಳ ತಡೆಗೆ ಅಬಕಾರಿ ಇಲಾಖೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಆಗಸ್ಟ್ ವರೆಗೆ ಅಬಕಾರಿ ಇಲಾಖೆಯಿಂದ 1313 ದಾಳಿಗಳನ್ನು ನಡೆಸಲಾಗಿದೆ. ಅಬಕಾರಿ ಕಾಯ್ದೆ ಕಲಂ 15ಎ ಅಡಿ 801 ಹಾಗೂ 61 ಘೋರ ಪ್ರಕರಣಗಳನ್ನು ದಾಖಲಿಸಲಾಗಿದೆ. 1570 ಲೀಟರ್ ಮದ್ಯ, 210 ಲೀಟರ್ ಬಿಯರ್ ಹಾಗೂ ಮದ್ಯ ಸಾಗಾಣಿಕೆಗೆ ಬಳಸಲಾದ 39 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಅಧೀಕ್ಷಕರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದ ಜಿಲ್ಲಾಧ್ಯಂತ 208 ತಪಾಸಣೆ ನಡೆಸಲಾಗಿದೆ. ಈ ಪೈಕಿ 5 ಸ್ಥಳಗಳಲ್ಲಿ ಒಟ್ಟು 6 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ.  ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ   ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ ಎಂದು ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಮಾಹಿತಿ ನೀಡಿದರು. ಅಂಗನವಾಡಿ ಹಾಗೂ ಆರೋಗ್ಯ ಇಲಾಖೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್,  ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಾಗೃತಿ ಸಮಿತಿ ಸದಸ್ಯರಾದ ಡಿ.ಓ.ಮೊರಾರ್ಜಿ, ಎಂ.ಡಿ.ನವಕೋಟಿ, ಬೋರಸ್ವಾಮಿ, ಹೇಮೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";